ಸುಳ್ಯ , ಆ 02 (DaijiworldNews/DB): ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಮಂಗಳವಾರ ಪರಿಶೀಲಿಸಿದರು.
ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆ ಸಂಪೂರ್ಣ ಜಲಾವೃತಗೊಂಡಿತ್ತು. ಕೊಯನಾಡಿನ ಗಣಪತಿ ಗುಡಿಯ ಬಳಿ ಇರುವ ಸೇತುವೆ ಬಿರುಕು ಬಿಟ್ಟಿದ್ದು, ಸುಳ್ಯ-ಮಡಿಕೇರಿ ಸಂಪರ್ಕ ಕಡಿತದ ಭೀತಿಯೂ ಎದುರಾಗಿದೆ.
ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇನ್ನು ಸುಬ್ರಹ್ಮಣ್ಯ ಬಳಿಯ ಕಲ್ಮಕಾರಿನಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಲ್ಮಕಾರು ಪೇಟೆ ಸಂಪರ್ಕಿಸುವ ಸಂತೆಡ್ಕ ಸೇತುವೆಯ ಒಂದು ಭಾಗ ತುಂಡಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಮಾರು ೧೫೦ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ. ಹರಿಹರ ಪಲ್ಲತ್ತಡ್ಕ ಪೇಟೆಗೆ ನೀರು ನುಗ್ಗಿದ ಪರಿಣಾಮ ರಸ್ತೆಯ ಬದಿಯ ಭಾಗ ಸಂಪೂರ್ಣ ಬಿರುಕು ಬಿಟ್ಟಿದ್ದಲ್ಲದೆ, ನೀರಲ್ಲಿ ಕೊಚ್ಚಿ ಹೋಗಿದೆ. ಇದರಿಂದಾಗಿ ಸನಿಹದ ಅಂಗಡಿಗಳೂ ಅಪಾಯದಲ್ಲಿವೆ. ಕೊಲ್ಲಮೊಗ್ರ ದೋಲನಮನೆ ಪರಿಸರದಲ್ಲಿ ಮನೆಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಜಾನುವಾರೊಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಗ್ರಾಮದ ಕಡಂಬಳದಲ್ಲಿ ಸೇತುವೆ ಮುರಿದು ಬಿದ್ದು, ಪೆರ್ನಾಜೆ, ಕಡಂಬಳ ಭಾಗದ ೪೦ ಮನೆಗಳ ಸಂಪರ್ಕ ಕಡಿತಗೊಂಡಿದೆ.
ಇನ್ನು ಸುಬ್ರಹ್ಮಣ್ಯದಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದ್ದು, ಆದಿ ಸುಬ್ರಹ್ಮಣ್ಯ ದೇವಳ, ಮಠಕ್ಕೆ ನೀರು ನುಗ್ಗಿತ್ತು. ಪಯಸ್ವಿನಿ ಉಕ್ಕಿ ಹರಿದ ಪರಿಣಾಮ ರಾತ್ರೋರಾತ್ರಿ ಸುಮಾರು ೧೮ಕ್ಕೂ ಹೆಚ್ಚು ಕುಟುಂಬಗಳು ಮನೆ ಬಿಟ್ಟು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ರಸ್ತೆಯಲ್ಲಿ ಹರಿದ ನೀರಿನ ಮಟ್ಟ ಕತ್ತಲಾಗುತ್ತಿದ್ದಂತೆ ಏರಿಕೆಯಾಗತೊಡಗಿತ್ತು. ಅಲ್ಲದೆ ನದಿ ನೀರಿನ ಮಟ್ಟ ಏರಿ ಸನಿಹದ ಮನೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ನದಿ ಬಳಿಯ ವಾಸಿಗಳು ಕೂಡಲೇ ಮುನ್ನೆಚ್ಚರಿಕೆ ವಹಿಸಿ ಸ್ಥಳಾಂತರಗೊಂಡಿದ್ದಾರೆ. ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಳವೂ ಜಲಾವೃತಗೊಂಡಿತ್ತು. ಇನ್ನು ವಿವಿಧೆಡೆ ಮನೆ, ಕೃಷಿ ಭೂಮಿ, ಅಂಗಡಿಗಳಿಗೆ ಹಾನಿ ಸಂಭವಿಸಿದೆ.
ಮಳೆಯಿಂದ ಗಂಭೀರ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಯವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಹಾನಿಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.