ಮಂಗಳೂರು,ಆ 02(DaijiworldNews/MS /HR): ಸುರತ್ಕಲ್ನಲ್ಲಿ ಗುರುವಾರ ರಾತ್ರಿ ನಡೆದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಹತ್ಯೆ ಹಿಂದೆ ಇರುವ ಆರೋಪಿಗಳಾದ ರೌಡಿಶೀಟರ್ ಸುಹಾಸ್ ಶೆಟ್ಟಿ ಹಾಗೂ ಆರು ಮಂದಿಯನ್ನು ಬಂಧಿಸಿದೆ.
ಈ ಬಗ್ಗೆ ಪೊಲೀಸ್ ಕಮೀಷನರ್ ಮಾಹಿತಿ ನೀಡಿದ್ದು, ಈ ಹತ್ಯೆ ಪ್ರಕರಣ ಆರೋಪಿಗಳ ಪತ್ತೆಗೆ ಪೊಲೀಸರ 7-8 ತಂಡ ಶ್ರಮಿಸಿದ್ದು, ಇಂದು ಬೆಳಗ್ಗೆ 5.30ಕ್ಕೆ ಉದ್ಯಾವರದಲ್ಲಿ ಸುಹಾಸ್ (29), ಮೋಹನ್ (26) ಗಿರಿಧರ್ (23 ), ಅಭಿಷೇಕ್ (23) ದೀಕ್ಷಿತ್ (21),ಶ್ರೀನಿವಾಸ್ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹತ್ಯೆ ಸಂಚು ರೂಪಿಸಿದ್ದ ರೌಡಿಶೀಟರ್:
ಈ ತಂಡದ ಆರೋಪಿಗಳು ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ, ಕೃತ್ಯಕ್ಕೆ ರೌಡಿಶೀಟರ್ ಸುಹಾಸ್ ಶೆಟ್ಟಿ ಮೊದಲು ಆರೋಪಿ ಅಭಿಷೇಕ್ ಜೊತೆ ಸೇರಿ ಜುಲೈ 26 ರಂದು ಯೋಜನೆ ರೂಪಿಸಿದ್ದು ಒಬ್ಬೊರಾಗಿ ಸೇರಿಕೊಂಡು ತಂಡವಾಗಿ ಕೆಲಸ ಮಾಡಿದ್ದಾರೆ. ಪ್ರತಿಕಾರಕ್ಕಾಗಿ ಯಾರನ್ನಾದರೂ ಹೊಡೆಯಬೇಕು ಎಂದು ಯೋಜಿಸಿ, ಹತ್ಯೆಗಾಗಿ ಮೊದಲು 6-7 ಮಂದಿಯನ್ನು ಟಾರ್ಗೆಟ್ ಮಾಡಿ ಅಂತಿಮವಾಗಿ ಫಾಝಿಲ್ ನನ್ನು ಗುರಿಯಾಗಿಸಿದ್ದಾರೆ.
ಈ ವೇಳೆ ಸುಹಾಸ್ ಶೆಟ್ಟಿ, ಅಭಿಷೇಕ್, ಗಿರಿಧರ್ ಕೊಲೆ ಮಾಡಲು ಕಾರು, ಮಾರಾಕಾಸ್ತ್ರ ಬೇಕು ಎಂದು ಹೋಟೆಲೊಂದರಲ್ಲಿ ಚರ್ಚೆ ನಡೆಸಿದ್ದು ಈ ವೇಳೆ ಆರೋಪಿ ಮೋಹನ್ ತನ್ನ ಮತ್ತಿಬ್ಬರು ಸ್ನೇಹಿತರಿಗೆ ಯೋಜನೆಗೆ ಸೇರಲು ಕರೆ ಮಾಡಿ ಆಹ್ವಾನ ನೀಡಿದ್ದಾನೆ.
ಕಾರಿಗೆ ಬಾಡಿಗೆ ನಿಗದಿ:
ಆ ಬಳಿಕ ಆರೋಪಿ ಮೋಹನ್ ಜು. 27 ರಂದು ತಮ್ಮ ಪರಿಚಯಸ್ಥ ಅಜಿತ್ ಕ್ರಾಸ್ತಾ ಎಂಬಾತನ ಬಳಿ, "ಮಹತ್ವದ ಕೆಲಸವೊಂದಿದೆ" ಎಂದು 15000 ರೂ ಬಾಡಿಗೆ ನಿಗದಿ ಮಾಡಿ ಕಾರು ಪಡೆದು ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಹೀಗಾಗಿ ಅಜಿತ್ ಕ್ರಾಸ್ತಾಗೂ ಘಟನೆಯ ಬಗ್ಗೆ ಅಸ್ಪಷ್ಟವಾದ ಮಾಹಿತಿ ಇತ್ತು.
ಹತ್ಯೆಗೂ ಮುನ್ನ ದೇವಾಲಯ ಭೇಟಿ.!
ಜು. 27 ರಂದು ಸುಹಾಸ್ ಶೆಟ್ಟಿ ಕಾವೂರಿನಲ್ಲಿ ಸ್ನೇಹಿತರ ಮನೆಯಲ್ಲಿ ತಂಗಿದ್ದು, ಜುಲೈ 28 ರಂದು ಸುಹಾಸ್ ಶೆಟ್ಟಿ ಮುಂಜಾನೆ ಕಾರಿನಲ್ಲಿ ಮಾರಾಕಾಸ್ತ್ರ ಹೊಂದಿಸಿಕೊಂಡು ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿದ್ದಾನೆ. ಇನ್ನು ಉಳಿದ ಮೂವರು ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಬಳಿಕ ಕೋರ್ಟ್ ಬಳಿ 6-7 ಮಂದಿ ಟಾರ್ಗೆಟ್ ನಲ್ಲಿ ಫಾಝಿಲ್ ಹೆಸರು ಅಂತಿಮಗೊಳಿಸಿದ್ದಾರೆ .
ಯೋಜಿತ ಸಂಚು:
ಫಾಝಿಲ್ ಹತ್ಯೆಯಲ್ಲಿ ಪ್ರೀತಿ - ಪ್ರೇಮ , ಆಂತರಿಕ ಘರ್ಷಣೆ , ರಾಂಗ್ ಟಾರ್ಗೆಟ್ ಎಂಬಿತ್ಯಾದಿ ವಿಚಾರವಾಗಿ ಗಾಳಿ ಸುದ್ದಿ ಹಬ್ಬಿದ್ದು, ಇದೆಲ್ಲವನ್ನೂ ತಳ್ಳಿ ಹಾಕಿದ ಪೊಲೀಸ್ ಆಯುಕ್ತರು, ಹಂತಕರ ಅಂತಿಮ ಟಾರ್ಗೆಟ್ ಫಾಝಿಲ್ ಆಗಿದ್ದು, ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುರತ್ಕಲ್ ನಲ್ಲಿ ಸಂಜೆಗತ್ತಲು ಆವರಿಸುತ್ತಿದ್ದಂತೆ ಚಲನವಲವನ್ನು ಫಾಲೋ ಮಾಡಿ ಹಂತಕರು ಏಕಾಏಕಿ ಮುಗಿಬಿದ್ದಿದ್ದಾರೆ. ಸುಹಾಸ್, ಮೋಹನ್, ಅಭಿಷೇಕ್ ಹಲ್ಲೆ ಮಾಡಿದ್ದು, ಈ ಪೈಕಿ ಗಿರಿಧರ್ ಡ್ರೈವಿಂಗ್ ಸೀಟಿನಲ್ಲಿದ್ದ. ದೀಕ್ಷಿತ್ ಕಾರಿನಲ್ಲಿದ್ದ. ಶ್ರೀನಿವಾಸ್ ಕವರಿಂಗ್ ಮಾಡುತ್ತಿದ್ದ. ನಂತರ 6 ಆರೋಪಿಗಳು ಪಲಿಮಾರು ಕಡೆಗೆ ಪರಾರಿಯಾಗಿದ್ದಾರೆ. ಬಳಿಕ ಕಾರನ್ನು ಕಾರ್ಕಳದ ಮನ್ನಾ ಗ್ರಾಮದಲ್ಲಿ ಬಿಟ್ಟು ಬೇರೆ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ
14 ದಿನಗಳ ಕಸ್ಟಡಿಗೆ ಕೋರಿದ ಪೊಲೀಸರು:
ಫಾಝಿಲ್ನನ್ನು ಹತ್ಯೆಗೈದ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಪೊಲೀಸ್ ಕಸ್ಟಡಿಗೆ ಕೋರಲಾಗಿದೆ.
ಆರೋಪಿಗಳಾದ ಸುಹಾಸ್ ಮೇಲೆ 4, ಮೋಹನ್ ಮೇಲೆ 2, ಗಿರಿಧರ್ ಮೇಲೆ 2, ಅಭಿಷೇಕ್ ಮೇಲೆ 2, ಶ್ರೀನಿವಾಸ್ ಮೇಲೆ 4, ದೀಕ್ಷಿತ್ ಮೇಲೆ 3 ಪ್ರಕರಣಗಳಿವೆ.
ಸದ್ಯ ಇಂದು ಬೆಳಗ್ಗೆ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ದೊರೆತ ಬಳಿಕ ಆರೋಪಿಗಳ ವಿಚಾರಣೆಯ ಬಳಿಕ ಫಾಝಿಲ್ನನ್ನು ಏಕೆ ಟಾರ್ಗೆಟ್ ಮಾಡಲಾಗಿದೆ ಎಂಬುದನ್ನು ತಿಳಿದು ಬರಲಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.