ಕಾಪು, ಆ 02 (DaijiworldNews/DB): ಕಾಪು ಬಳಿಯ ಮಜೂರು ನಿವಾಸಿ ಗೋವರ್ಧನ್ ಭಟ್ ಅವರು ಈ ಬಾರಿಯೂ ಮಂಗಳವಾರ ನಡೆದ ನಾಗರ ಪಂಚಮಿಯಂದು ತಮ್ಮ ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿರುವ ಜೀವಂತ ನಾಗರ ಹಾವಿಗೆ ಜಲಾಭಿಷೇಕ ನಡೆಸಿ, ದೀಪ ಬೆಳಗಿ ನಾಗರ ಪಂಚಮಿ ಹಬ್ಬ ಆಚರಿಸಿದರು.
ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿರುವ ಗೋವರ್ಧನ ಭಟ್ ಅವರು ಕ್ಯಾಟರಿಂಗ್ ವೃತ್ತಿಯನ್ನೂ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಅಪಘಾತಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ನಾಗರ ಹಾವುಗಳನ್ನು ತಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಅದು ಸಂಪೂರ್ಣ ಗುಣಮುಖವಾದಾಗ ಮತ್ತೆ ಅದನ್ನು ಕಾಡಿಗೆ ಬಿಡುವುದು ಅವರ ನೆಚ್ಚಿನ ಕಾಯಕ. ಕಳೆದ 20 ವರ್ಷಗಳಿಂದ ಈ ಕೆಲಸವನ್ನು ಅವರು ಮಾಡಿಕೊಂಡು ಬರುತ್ತಿದ್ದಾರೆ. ಎಲ್ಲೇ ಗಾಯಗೊಂಡಿರುವ ಹಾವು ಬಗ್ಗೆ ಯಾರೇ ದೂರವಾಣಿ ಕರೆ ಮಾಡಿದರೂ, ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಗೆ ಧಾವಿಸುವ ಗೋರ್ವಧನ ಭಟ್ ಅವರಿಗೆ ನಾಗರ ಹಾವಿನ ಡಾಕ್ಟ್ರ್ ಎಂದೂ ಕರೆಯಲಾಗುತ್ತದೆ.
ಕಳೆದ ಬಾರಿಯೂ ಅವರು ನಾಗರ ಪಂಚಮಿಯಂದು ತಮ್ಮ ಮನೆಯಲ್ಲಿ ಶುಶ್ರೂಷೆಯಲ್ಲಿರುಯವ ನಾಗರ ಹಾವಿಗೆ ಜಲಾಭಿಷೇಕ ನಡೆಸಿ, ದೀಪ ಬೆಳಗಿದ್ದರು. ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ.