ಮಂಗಳೂರು/ಉಡುಪಿ, ಆ 02 (DaijiworldNews/DB): ಕರಾವಳಿಯಾದ್ಯಂತ ಮಂಗಳವಾರ ನಾಗರಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾಗ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುರಸ್ಕಾರ, ನಾಗನಿಗೆ ಅಭಿಷೇಕ ನಡೆಯಿತು.
ಕರಾವಳಿ ಜಿಲ್ಲೆಯ ಜನರ ಮೊದಲ ಹಬ್ಬ ನಾಗರಪಂಚಮಿ. ಮೊದಲ ಹಬ್ಬವನ್ನು ಶ್ರದ್ದಾಭಕ್ತಿಯಿಂದ, ಸಂಭ್ರಮದಿಂದ ಆಚರಿಸಲಾಯಿತು. ಕರಾವಳಿಯ ಪ್ರಮುಖ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಆದರೆ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದೇವಳಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿತ್ತು. ವರ್ಷಂಪ್ರತಿ ನಾಗರ ಪಂಚಮಿಯಂದು ಭಕ್ತರಿಂದ ತುಂಬಿ ತುಳುಕುತ್ತಿದ್ದ ಕುಕ್ಕೆ ಕ್ಷೇತ್ರದಲ್ಲಿ ಈ ಬಾರಿ ವಿಪರೀತ ಮಳೆಯಿಂದಾಗಿ ಭಕ್ತರೇ ಇರಲಿಲ್ಲ. ಹೀಗಾಗಿ ಅರ್ಚಕರು ಮತ್ತು ಸ್ಥಳೀಯ ಕೆಲ ಮಂದಿಯಷ್ಟೇ ದೇವಳದಲ್ಲಿ ದೇವರಿಗೆ ವಿಶೇಷ ಪೂಜೆಗಳು ನಡೆದವು. ಭಕ್ತರ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ ಸೇವೆಗಳು ನಡೆಯಲಿಲ್ಲ.
ಇನ್ನು ಮಂಗಳೂರಿನ ಪ್ರಮುಖ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಳದಲ್ಲಿ ನಾಗರಪಂಚಮಿಯಂದು ವಿಶೇಷ ಪೂಜೆಗಳು ಜರಗಿದವು. ಸಣ್ಣ ಪ್ರಮಾಣದಲ್ಲಿ ಮಳೆ ಬರುತ್ತಿದ್ದರೂ, ಮಳೆಯನ್ನು ಲೆಕ್ಕಿಸದೆ ಭಕ್ತಾದಿಗಳು ದೇವಳಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ನಾಗನ ವಿಗ್ರಹಕ್ಕೆ ಹಾಲು, ಸೀಯಾಳ ಸಮರ್ಪಿಸಲಾಯಿತು. ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯದ ವಿವಿಧ ದೇವಸ್ಥಾನಗಳಲ್ಲಿ ಶ್ರದ್ದಾಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಯಿತು.
ಉಡುಪಿ ಶ್ರೀ ಕೃಷ್ಣ ಮಠ, ಕಡೆಕಾರಿನ ಶ್ರೀ ಲಕ್ಷ್ಮೀನಾರಾಯಣ ಮಠದ ಶ್ರೀ ನಾಗದೇವರ ಗುಡಿ, ಸರಳಬೆಟ್ಟು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧ ದೇವಳಗಳಲ್ಲಿ ನಾಗದೇವರಿಗೆ ಪೂಜೆ ನೆರವೇರಿತು. ಭಕ್ತಾದಿಗಳು ದೇವಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿವಿಧ ಸೇವೆಗಳಲ್ಲಿ ಪಾಲ್ಗೊಂಡರು.
ನಾಗಬನಗಳಲ್ಲಿ ಪೂಜೆ
ತುಳುನಾಡಿನ ಮೂಲದೇವರೆಂಬ ನಂಬಿಕೆ ಇರುವ ನಾಗ ದೇವರಿಗೆ ಕೇವಲ ದೇವಸ್ಥಾನ ಮಾತ್ರವಲ್ಲದೆ ಕುಟುಂಬಗಳ ನಾಗಬನಗಳಲ್ಲಿಯೂ ವಿವಿಧ ಪೂಜೆಗಳು ನೆರವೇರಿತು. ನಾಗಬನಗಳಲ್ಲಿ ವಿಶೇಷ ಪೂಜೆ, ನಾಗ ದೇವರಿಗೆ ಹಾಲಿ, ಸೀಯಾಳ ಅಭಿಷೇಕ ಜರಗಿತು. ಕುಟುಂಬದ ಸಮಸ್ತರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು. ಊರು, ಗ್ರಾಮಗಳ ನಾಗಬನಗಳು, ಜಮೀನಿನ ನಾಗಬನಗಳಲ್ಲಿಯೂ ತನು ಎರೆಯುವ ಮೂಲಕ ಭಕ್ತಾದಿಗಳು ನಾಗರ ಪಂಚಮಿಯನ್ನು ಆಚರಿಸಿದರು. ನಾಗನಕಲ್ಲುಗಳಿಗೆ ಹಾಲು, ಎಳನೀರು ಸಹಿತ ಮಂಗಲ ದ್ರವ್ಯಗಳ ಅಭಿಷೇಕ ನಡೆಯಿತು.