ಮಂಗಳೂರು, ಆ 02 (DaijiworldNews/DB): ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇನ್ನಿಬ್ಬರು ಆರೋಪಿಗಳ ಬಂಧನವಾಗಿದೆ. ಆ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಬೆಳ್ಳಾರೆ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ ( 32) ಮತ್ತು ಹ್ಯಾರಿಸ್ (42) ಬಂಧಿತರು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಫೀಕ್ ಮತ್ತು ಜಾಕೀರ್ ಎಂಬಿಬ್ಬರನ್ನು ಜುಲೈ 28ರಂದು ಪೊಲೀಸರು ಬಂಧಿಸಿದ್ದರು. ಅಲ್ಲದೆ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ವೇಳೆ ಲಭಿಸಿದ ಮಾಹಿತಿಯಾಧಾರಿತವಾಗಿ ಈಗಾಗಲೇ ಹಲವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಪ್ರಕರಣ ಸಂಬಂಧ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ.
ಹಂತಕರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಇಲ್ಲಿವರೆಗಿನ ತನಿಖೆ ಆಧಾರಿತವಾಗಿ ತನಿಖಾಧಿಕಾರಿಗಳು ಶಂಕಿತ ಸಂಚುಕೋರರು ಮತ್ತು ದಾಳಿಕೋರರನ್ನು ಗುರುತಿಸಿದ್ದಾರೆ. ಶಂಕಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.