ಸುಬ್ರಹ್ಮಣ್ಯ, ಆ 02 (DaijiworldNews/HR): ಭಾರೀ ಮಳೆ ಸುರಿದ ಪರಿಣಾಮ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡ್ಡ ಕುಸಿದು ಸೋಮವಾರ ರಾತ್ರಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮಣ್ಣಿನಡಿ ಸಿಲುಕಿದ ಸೋದರಿಯರನ್ನು ದೀರ್ಘ ಕಾರ್ಯಾಚರಣೆಯ ಬಳಿಕ ಮೇಲಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ.
ಪರ್ವತಮುಖಿಯ ಕುಸುಮಾಧರ ಅವರ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಅವರ ಮಕ್ಕಳಾದ ಶ್ರುತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.
ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಸಂಜೆಯಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ಸಂಜೆ 7 ಗಂಟೆ ಸುಮಾರಿಗೆ ಒಮ್ಮೆಲೇ ಭಾರೀ ಜೋರಾದ ಶಬ್ದ ಕೇಳಿಸಿತ್ತು. ಈ ವೇಳೆ ಮನೆಯ ಜಗಲಿಯಲ್ಲಿ ಓದುತ್ತಿದ್ದ ಶ್ರುತಿ ಪುಸ್ತಕವನ್ನು ಅಲ್ಲಿಯೇ ಬಿಟ್ಟು ಶಬ್ದ ಮನೆಯ ಒಳಗಿಂದ ಬಂದಿರಬಹುದು ಎಂದು ಅತ್ತ ಓಡಿದಳು. ಜ್ಞಾನಶ್ರೀ ಮನೆಯ ಒಳಗೆ ಚಾವಡಿಯಲ್ಲಿದ್ದು ದೊಡ್ಡವಳು ಕೂಡ ಅಲ್ಲಿಗೆ ತಲುಪಿದ್ದರು. ಇದೇ ಸಂದರ್ಭ ಗುಡ್ಡ ಮನೆಯ ಮೇಲೆಯೇ ಕುಸಿಸಿದೆ. ಅಡುಗೆಯಲ್ಲಿ ನಿರತರಾಗಿದ್ದ ತಾಯಿ ಅದೇ ಕ್ಷಣ ಶಬ್ದಕ್ಕೆ ಹೆದರಿ ಮಕ್ಕಳು ಹೊರಗಿದ್ದಾರೆ ಎಂದು ಹೊರಗಡೆ ಬಂದಿದ್ದಾರೆ.
ಇನ್ನು ಭಾರೀ ಮಳೆಯಿಂದಾಗಿ ಮರ ಬಿದ್ದು ಹಾಗೂ ನೀರು ಉಕ್ಕಿ ಹರಿದು ಸಂಪರ್ಕ ಸಾಧ್ಯವಿರುವ ಎರಡು ಕಡೆಯಿಂದಲೂ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಘಟನ ಸ್ಥಳಕ್ಕೆ ಶೀಘ್ರ ತೆರಳಲು ಸಾಧ್ಯವಾಗಿರಲಿಲ್ಲ. ತಡರಾತ್ರಿ ಸುರಿಯುತ್ತಿದ್ದ ಮಳೆಯೂ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಮಣ್ಣಿನಡಿ ಸಿಲುಕಿದ ಸೋದರಿಯರನ್ನು ದೀರ್ಘ ಕಾರ್ಯಾಚರಣೆಯ ಬಳಿಕ ಮೇಲ ಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿರುವುದನ್ನು ಕಂಡು ಎಲ್ಲರ ಕಣ್ಣಂನಲ್ಲಿ ನೀರು ತುಂಬಿತ್ತು.