ಸುಬ್ರಹ್ಮಣ್ಯ, ಆ 01(DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಭಾರೀ ಮಳೆಯಾಗ್ತಾ ಇದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಈ ನಡುವೆ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದ ಪರ್ವತ ಮುಖಿ ಎಂಬಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿಗೆ ಸಿಲುಕಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದ್ದು ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಮೂಲತಃ ಪಂಜದ ಕರಿಮಜಲು ಕುಶಾಲಾಪ್ಪ ಎಂಬವರ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದದ್ದು, ಅವರ ಇಬ್ಬರು ಮಕ್ಕಳಾದ ಶ್ರುತಿ (11) ಹಾಗೂ ಜ್ಞಾನ ಶ್ರೀ (6) ಮಣ್ಣಿನಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ಮಾಡುವ ಕಾರ್ಯ ಮುಂದುವರಿದಿದೆ.
ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಡರಾತ್ರಿಯಲ್ಲೂ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ಮನೆಯಲ್ಲಿ ಐದು ಜನರಿದ್ದರು ಎನ್ನಲಾಗಿದ್ದು ಘಟನೆ ವೇಳೆ ಮೂವರು ಹೊರಗೋಡಿ ಪಾರಾಗಿದ್ದು, ಇಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ
ಇನ್ನು ಸ್ಥಳಕ್ಕೆ ಜೆಸಿಬಿ ತರಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆಯಲ್ಲಿ ವರುಣನ ಆರ್ಭಟದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಸುಬ್ರಹ್ಮಣ್ಯದ ದರ್ಪಣ ತೀರ್ಥ ಉಕ್ಕಿ ಹರಿಯುತ್ತಿದೆ. ಈ ಕಾರಣದಿಂದಾಗಿ ಮುಂದಿನ ಎರಡು ದಿನಗಳ ಕಾಲ ಭಕ್ತರು ಸುಬ್ರಹ್ಮಣ್ಯ ಕ್ಷೇತ್ರದತ್ತ ತೆರಳದಂತೆ ಸಹಕರಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮನವಿ ಮಾಡಿಕೊಂಡಿದ್ದಾರೆ.