ಕಡಬ, ಆ 01 (DaijiworldNews/SM): ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಸುಬ್ರಹ್ಮಣ್ಯದ ದರ್ಪಣ ತೀರ್ಥ ಉಕ್ಕಿ ಹರಿಯುತ್ತಿದೆ. ಈ ಕಾರಣದಿಂದಾಗಿ ಮುಂದಿನ ಎರಡು ದಿನಗಳ ಕಾಲ ಭಕ್ತರು ಸುಬ್ರಹ್ಮಣ್ಯ ಕ್ಷೇತ್ರದತ್ತ ತೆರಳದಂತೆ ಸಹಕರಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮನವಿ ಮಾಡಿಕೊಂಡಿದ್ದಾರೆ.
ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇತುವೆಗಳು ಮುಳುಗಡೆಯಾಗಿದೆ. ಕ್ಷೇತ್ರ ಪರಿಸರದಾದ್ಯಂತ ಮನೆ, ಅಂಗಡಿಗಳು ಜಲಾವೃತವಾಗಿವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪರದಾಡುತ್ತಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಭಕ್ತರು ಕ್ಷೇತ್ರಕ್ಕೆ ತೆರಳದಂತೆ ಭಕ್ತರಲ್ಲಿ ಡಿಸಿ ರಾಜೇಂದ್ರ ಕೆ.ವಿ. ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮಂಗಳವಾರದಂದು ನಾಗರ ಪಂಚಮಿ ಆಚರಿಸಲಾಗುತ್ತಿದ್ದು, ನಾಗಕ್ಷೇತ್ರದತ್ತ ಭಕ್ತರ ದಂಡು ಹರಿದು ಬರುತ್ತದೆ. ಲಕ್ಷಾಂತರ ಭಕ್ತರು ನಾಗರಪಂಚಮಿ ಧಾರ್ಮಿಕ ವಿಧಿಯಲ್ಲಿ ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.