ಉಡುಪಿ, ಆ 01 (DaijiworldNews/HR): ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದ್ದು,ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿ 32 ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ ಎಂದು ಮೀನುಗಾರಿಕೆ ಬಂದರು ಸಚಿವ ಸುಳ್ಯ ಶಾಸಕ ಅಂಗಾರ ಎಸ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದ್ದು, ಮತ್ತಿಬ್ಬರನ್ನು ಪತ್ತೆ ಹಚ್ಚುವ ಕೆಲಸ ಇಲಾಖೆ ಮಾಡುತ್ತಿದೆ. ಮುಂದಿನ ದಿನ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿ 32 ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಂಜೂರಾತಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾದವರ ಬಗ್ಗೆ ನಂತರ ವಿವರ ನೀಡುತ್ತೇವೆ. ಕೇವಲ ಇಬ್ಬರಲ್ಲ ನಾಲ್ಕು ಜನ ರ ಪತ್ತೆ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತರ ಆಕ್ರೋಶ ಸಹಜ. 25ನೇ ತಾರೀಕಿಗೆ ನಾನು ದೆಹಲಿಗೆ ಹೋಗಿದ್ದೆ. 26 ನೇ ತಾರೀಕಿನ ರಾತ್ರಿ ಘಟನೆಯಾಗಿದ್ದು, 26ರಂದು ನಾನು ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದೆ. ಏನೇನು ಕ್ರಮ ಕೈಗೊಳ್ಳಬೇಕು ಎಲ್ಲಾ ಕ್ರಮವನ್ನು ನಾನು ವಹಿಸಿದ್ದೇನೆ. ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಕೂಡ ಎಲ್ಲಾ ಕರ್ತವ್ಯ ನಿಭಾಯಿಸಿದ್ದಾರೆ. ಮುಖ್ಯಮಂತ್ರಿಗಳು ಸ್ವತಹ ಬೆಳ್ಳಾರೆಗೆ ಬಂದಿದ್ದಾರೆ. ಈಗ ಕಾರ್ಯಕರ್ತರು ಸಮಾಧಾನವಾಗಿದ್ದಾರೆ ಎಂದರು.
ಇನ್ನು ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಕೆಲವರು ರಾಜೀನಾಮೆ ಕೊಟ್ಟಿದ್ದಾರೆ, ಆದರೆ ರಾಜೀನಾಮೆ ಪರಿಹಾರವಲ್ಲ. ಹಂತಕರಿಗೆ ಸರಿಯಾದ ಶಿಕ್ಷೆ ಕೊಡುವುದೇ ಪರಿಹಾರ ಎಂದಿದ್ದಾರೆ.
ಮಸೂದ್ ಮನೆಗೆ ಭೇಟಿ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ತಾರತಮ್ಯ ಮಾಡಿಲ್ಲ. ಮಸೂದ್ ವಿಚಾರದಲ್ಲಿ ಗಾಂಜದ ಪ್ರಕರಣ ಇದೆ. ಅಲ್ಲಿ ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಲಾಗಿದ್ದು, ಅದು ಈ ರೀತಿಯ ಮರ್ಡರ್ ಅಲ್ಲ. ಮುಸ್ಲಿಂ ಕ್ರಿಶ್ಚಿಯನ್ ಹಿಂದೂ ಭೇದ ಭಾವ ನಮಗೆ ಇಲ್ಲ ಎಂದು ಹೇಳಿದ್ದಾರೆ.