ಉಡುಪಿ, ಆ 01(DaijiworldNews/MS): ಬೆಳ್ಳಾರೆಯ ಪ್ರವೀಣ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಪೊಲೀಸರಿಂದ ಈಗಾಗಲೆ ಪ್ರಾಥಮಿಕ ವರದಿ ಪಡೆದಿದ್ದೇನೆ. ಈ ಕೃತ್ಯದ ಹಿಂದೆ ಕೈವಾಡ ಇರುವ ಎಲ್ಲರ ಸುಳಿವು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹತ್ತರವಾದ ಸುಳಿವ ಸಿಕ್ಕಿದೆ ಎಂದು ಇಲಾಖೆ ಹೇಳಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಎಡಿಜಿಪಿ ಇಲ್ಲೇ ಮೊಕ್ಕಾಂ ಹೂಡಿದ್ದಾರೆ. ಸಿಸಿಟಿವಿ ಫೂಟೇಜ್ ಮೂಲಕ ಪತ್ತೆ ಹಚ್ಚುತ್ತಾರೆ. ನಮ್ಮ ಪೊಲೀಸ್ ಅಧಿಕಾರಿಗಳು ಹಣಕಾಸು ನೆರವು ಮಾಡಿದವರು ಯಾರು ಎಂದು ಪತ್ತೆ ಮಾಡುತ್ತಾರೆ. ನಿಜವಾದ ಕೊಲೆಗಾರರನ್ನು ಬಯಲಿಗೆಳೆಯುತ್ತಾರೆ.
ಯಾವುದೇ ಹತ್ಯೆಯನ್ನು ನಾವು ಸಮರ್ಥಿಸುವುದಿಲ್ಲ. ವೈಚಾರಿಕ ವಿಷಯಗಳು ಚರ್ಚೆಯ ಮೂಲಕ ಆಗಬೇಕು. ಹಿಂಸಾ ರೂಪದಲ್ಲಿ ಯಾವುದೇ ಕೃತ್ಯ ನಡೆಯಬಾರದು. ಇಡೀ ದೇಶದಲ್ಲಿ ಜಿಹಾದ್ ನ ಹಿಂಸಾಚಾರ ಹೆಚ್ಚಿದೆ. ಇದು ಕೇವಲ ಮಂಗಳೂರಿಗೆ ಸೀಮಿತವಾಗಿಲ್ಲ. ಜಿಹಾದ್ ಹಿಂಸಾಚಾರ ರಾಜ್ಯದ ಹತ್ತು ಹಲವು ಜಿಲ್ಲೆ ವಿವಿಧ ರಾಜ್ಯಗಳಿಗೂ ವಿಸ್ತರಿಸಿದೆ. ಈ ಹಿಂದೆ ಕಾಶ್ಮೀರಕ್ಕೆ ಮಾತ್ರ ಜಿಹಾದ್ ಹಿಂಸಾಚಾರ ಸೀಮಿತವಾಗಿತ್ತು. ಈಗ ಪ ಬಂಗಾಳ ರಾಜಸ್ಥಾನ ಕೇರಳಕ್ಕೂ ವಿಸ್ತರಣೆಯಾಗಿದೆ. ಕರ್ನಾಟಕ ರಾಜ್ಯಕ್ಕೂ ಇದು ವಿಸ್ತರಿಸಿದೆ. ಜಿಹಾದ್ ನ ಹಿಂಸಾಚಾರ ಎಲ್ಲಿಗೆ ಮುಟ್ಟುತ್ತೆ ಎಂದು ಸಮುದಾಯ ಆಲೋಚನೆ ಮಾಡಬೇಕು. ಮುಸ್ಲಿಂ ರಾಷ್ಟ್ರಗಳೇ ದೊಡ್ಡ ಪ್ರಮಾಣದಲ್ಲಿ ವಿಮುಖರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಹಿಂಸಾಚಾರದ ಮೂಲಕವೇ ವಿಚಾರ ಹರಡುತ್ತೇವೆ ಎಂದರೆ ನಾಗರಿಕ ಸಮಾಜ ಒಪ್ಪುವುದಿಲ್ಲ. ಅಹಿತಕರ ಘಟನೆಗಳಿಗೆ ಪ್ರಯತ್ನ ಮಾಡಿದರೆ ಅಂಥವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೆ. ಜಿಹಾದಿ ಶಕ್ತಿಗಳ ವಿರುದ್ಧ ಸಮಾಜ ಒಂದಾಗಬೇಕು" ಎಂದರು.
ರಾಜ್ಯದಲ್ಲಿ ಯುವಮೋರ್ಚಾ ಕಾರ್ಯಕರ್ತರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಕಾರ್ಯಕರ್ತರ ಕೋಪ ಸಹಜವಾಗಿದೆ. ಕಾರ್ಯಕರ್ತರ ಕೋಪವನ್ನು ಯಾವತ್ತು ಸರಿಯಲ್ಲ ಎನ್ನುವುದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ಅಪಸ್ವರ ಇರುತ್ತೆ. ತಂದೆ ಮಗನಿಗೆ ಮಗ ತಂದೆಗೆ ಬುದ್ಧಿ ಹೇಳಲೇಬೇಕು. ಅದನ್ನು ಭಿನ್ನಾಭಿಪ್ರಾಯ ಎನ್ನಲು ಸಾಧ್ಯವಿಲ್ಲ. ಕಾರ್ಯಕರ್ತರು ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಅನ್ನೋದು ಸರಿಯಾಗಿದೆ. ಅವರ ಅಭಿಪ್ರಾಯವನ್ನು ನಾವು ಸ್ವೀಕರಿಸಿದ್ದೇವೆ. ನಮ್ಮ ಪಕ್ಷದಲ್ಲಿ ಆ ರೀತಿ ಬದ್ಧತೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ನಾನೊಬ್ಬ ಕಾರ್ಯಕರ್ತನಾಗಿ ಗೌರವಿಸುತ್ತೇನೆ. ಕಾರ್ಯಕರ್ತರಿಗೆ ಎಲ್ಲವನ್ನೂ ತಿಳಿ ಹೇಳುತ್ತೇವೆ" ಎಂದರು.
ಮುಖ್ಯಮಂತ್ರಿ ಗಳು ಮಸೂದ್ ಮನೆಗೆ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಈ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟ ಮಾಡಿದ್ದಾರೆ ನಾನೇನು ಹೇಳುವುದಿಲ್ಲ ಎಂದರು.
ರಾಷ್ಟ್ರೀಯತೆಯ ವಿಚಾರ ಅಭಿವೃದ್ಧಿಯ ವಿಚಾರ ಎಲ್ಲಾ ವರ್ಗದವರಿಗೂ ಒಪ್ಪುತ್ತಾರೆ. ಆಕ್ರೋಶ ಪ್ರತಿರೋಧ ಬಂದಿದೆ ಎಂಬ ಕಾರಣಕ್ಕೆ ರಾಷ್ಟ್ರೀಯತೆಯಿಂದ ವಿಮುಖರಾಗುವುದಿಲ್ಲ. ಜಿಹಾದಿಗಳ ಕುತಂತ್ರ ಮುಂದಿನ ಯೋಚನೆಗಳನ್ನು ಸಮಾಜದ ಮುಂದೆ ಇಡುತ್ತೇವೆ. ಸಮಾಜ ಈ ಕುರಿತು ಜಾಗೃತವಾಗ ಬೇಕು. ಇಸ್ಲಾಮ್ ನ ವೈಭವೀಕರಣ ಮತ್ತು ಜಿಹಾದ್ ಮತೀಯ ಶಕ್ತಿಗಳ ಕಾರ್ಯಕ್ರಮಗಳನ್ನು ಸಮಾಜದ ಮುಂದೆ ಇಡುತ್ತೇವೆ. ಸರ್ಕಾರ ಬೇಕೋ ಹಿಂದುತ್ವ ಬೇಕೋ ಅಂದಾಗ ಸರ್ಕಾರವನ್ನು ಬದಿಗಿಟ್ಟು ಹಿಂದುತ್ವ ಆಯ್ಕೆ ಮಾಡಿಕೊಳ್ಳುತ್ತೇವೆ. ಬಿಜೆಪಿ ಆರಂಭ ಆಗಿದ್ದು ಮುಖರ್ಜಿಯವರು ಅಧಿಕಾರ ತ್ಯಜಿಸಿರುವ ಮೂಲಕ. ಬಿಜೆಪಿ ಮತ್ತು ಜನಸಂಘದ ಹುಟ್ಟು ಆಗಿರುವುದೇ ಬಲಿದಾನದ ಮುಖಾಂತರ. ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡೆ ಸರಕಾರ ನಡೆಸುತ್ತೇವೆ. ಅದೇ ಕಾರಣಕ್ಕೆ ನಾವು ಗೋ ಹತ್ಯೆ ನಿಷೇಧ ಕಾನೂನು ತಂದಿದ್ದೇವೆ. ಅದೇ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ತಂದಿದ್ದೇವೆ. ಸಮಾಜದ ಹಿತ ದೃಷ್ಟಿಯಿಂದ ಮತ್ತಷ್ಟು ಒಳ್ಳೆ ಕಾನೂನು ತರುತ್ತೇವೆ. ಮೋದಿಯವರ ನವ ಭಾರತದ ನಿರ್ಮಾಣಕ್ಕೆ ನವ ಕರ್ನಾಟಕದ ಕೊಡುಗೆ ನೀಡುತ್ತೇವೆ ಎಂದರು.