ಪುತ್ತೂರು,ಜ 28 (MSP): ಆಸೆ, ಆಕಾಂಕ್ಷೆಗಳನ್ನಿಟ್ಟು ಕಟ್ಟಿದ ಮನೆಯನ್ನು ತಮ್ಮ ಬಜೆಜ್ ಗೆ ಅನುಸಾರವಾಗಿ ಎಷ್ಟು ಸಾಧ್ಯವೋ, ಅಷ್ಟು ಸುಂದರವಾಗಿ ಮಾಡಲು ಪ್ರಯತ್ನಿಸದೇ ಇರುವವರು ಬಹಳ ವಿರಳ. ಅದರಲ್ಲೂ ಮನೆಯು ಅತ್ಯಂತ ಆಕರ್ಷಕವಾಗಿ ಕಾಣಲು ಬಗೆ ಬಗೆಯ ಬಣ್ಣಗಳನ್ನು ಬಳಿಯೋದು ಇದೀಗ ಫ್ಯಾಷನ್ ಕೂಡಾ ಆಗಿದೆ. ಸುಂದರ ಗೋಡೆಗಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪ್ರಕಾರದ ರಾಸಾಯನಿಕ ಮಿಶ್ರಿತ, ಸಿಂಥೆಟಿಕ್ ಪೈಂಟ್ ಗಳನ್ನು ಬಳಸಲಾಗುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರು ಈ ರಾಸಾಯನಿಕ ಪೈಂಟ್ ಗಳನ್ನು ಬಳಸದೆ ದೇಶೀ ಹಸುಗಳ ಸೆಗಣಿಯಲ್ಲೇ ಪೈಂಟ್ ನಿರ್ಮಿಸಿ ಮನೆಯ ಕೋಟೆಗಳನ್ನು ಸಿಂಗರಿಸಿದ್ದಾರೆ.
ಹೌದು ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ| ಶಶಿಶೇಖರ ಭಟ್ ಅವರು ನಾಟಿ ಹಸುವಿನ ಸೆಗಣಿ ಬಳಸಿ ಮನೆಯ ಗೋಡೆಗೆ ಬಳಿಯುವ ಬಣ್ಣ ತಯಾರಿಸಿ ಯಶಸ್ವಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿ ಯಶಸ್ವಿಯಾಗಿದ್ದಾರೆ.
ಸೆಗಣಿಗೆ ಕೆಲವು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೈಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿ ಮನೆಯ ಎಲ್ಲಾ ಕೋಣೆಗಳಿಗೂ ಬಳಿಯಲಾಗಿದೆ. ಇರ್ದೆಯ ಆಯುರ್ವೇದ ವೈದ್ಯರಾದ ಡಾ. ಶಶಿಶೇಖರ್ ಭಟ್ ಸೆಗಣಿಯನ್ನು ಬಳಸಿ ಈ ರೀತಿಯ ಹೊಸ ಪ್ರಯೋಗವನ್ನು ಮಾಡಿದ್ದು, ಸೆಗಣಿಯ ಈ ಪೈಂಟನ್ನು ಹಲವು ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಅನಾದಿ ಕಾಲದಿಂದಲೂ ಸೆಗಣಿಯನ್ನು ಅತ್ಯಂತ ಪವಿತ್ರ ಹಾಗೂ ರೋಗ ನಿರೋಧಕ ಶಕ್ತಿಯುಳ್ಳ ವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಹಿಂದಿನ ಕಾಲದಲ್ಲೂ ಸೆಗಣಿಯನ್ನು ಗೋಡೆಗಳಿಗೆ ಹಾಗೂ ನೆಲಕ್ಕೆ ಬಳಿಯುವಂತಹ ವ್ಯವಸ್ಥೆಗಳಿತ್ತು. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಇದು ನೇಪತ್ಯಕ್ಕೆ ಸರಿದ ಪರಿಣಾಮ ರಾಸಾಯನಿಕ ಮಿಶ್ರಿತ ಪೈಂಟ್ ಗಳನ್ನು ಬಳಸಲು ಆರಂಭವಾಗಿದೆ. ಸೆಗಣಿಯ ಪೈಂಟ್ ಮಾಡುವುದರ ಮುಖ್ಯ ಉದ್ಧೇಶ ಮನೆ ಮಂದಿಯ ಆರೋಗ್ಯದ ಮೇಲೆ ಸೆಗಣಿಯ ರೋಗ ನಿರೋಧಕ ಶಕ್ತಿಯ ಪರಿಣಾಮ ಬೀಳಲಿ ಎನ್ನುವುದು ಡಾ.ಶಶಿಶೇಖರ್ ಭಟ್ ಅವರ ಉದ್ಧೇಶವಾಗಿದೆ.
ಸಿಂಥೆಟಿಕ್ ಪೈಂಟ್
ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೈಂಟ್ ಗಳಂತೆಯೇ ಸೆಗಣಿಯ ಪೈಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೈಂಟ್ ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸೆಗಣಿಯ ಪೈಂಟನ್ನೂ ಎರಡು ಬಾರಿ ಬಳಿಯಬೇಕಾಗುತ್ತದೆ. ಅಲ್ಲದೆ ಈ ಪೈಂಟ್ ವಾಟರ್ ಫ್ರೋಫ್ ಕೂಡಾ ಆಗಿದೆ. ರಾಸಾಯನಿಕ ಪೈಂಟ್ ಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಪೈಂಟ್ ನಲ್ಲಿ ಇಲ್ಲದ ಕಾರಣ ಪೈಂಟರ್ ಗಳೂ ಇಂಥ ಪೈಂಟ್ ಗಳು ಹೆಚ್ಚೆಚ್ಚು ಮಾರುಕಟ್ಟೆಗೆ ಬರಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಸ್ವದೇಶೀ ತಳಿಯ ಗೋವಿನ ಸೆಗಣಿಯಿಂದ ಮಾತ್ರವೇ ಈ ಸೆಗಣಿ ಪೈಂಟ್ ತಯಾರಿಸಲು ಸಾಧ್ಯ. ಸೆಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸೆಗಣಿಯ ಪೈಂಟ್ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಾಗಿದೆ.
ಅಡ್ಡ ಪರಿಣಾಮವಿಲ್ಲ
ನಾವು ವಾಸಿಸುವ ಜಾಗವನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್ (ಬಣ್ಣ) ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದಾರೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ ಎಂದು ಡಾ| ಶಶಿಶೇಖರ ಭಟ್ ಹೇಳುತ್ತಾರೆ. ಇದಲ್ಲದೆ ಉಷ್ಣಾಂಶ ತಡೆಯುವ ಶಕ್ತಿ ಈ ಗೋ ರಂಗ್ ಗೆ ಇದೆ ಎನ್ನುತ್ತಾರೆ ಭಟ್.