ಮಂಗಳೂರು, ಜು 31(DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ಪೊಲೀಸ್ ಇಲಾಖೆಯ ಕೋರಿಕೆಯ ಮೇಲೆ ಎರಡು ದಿನಗಳ ಕಾಲ ವಿಸ್ತರಿಸಿ ಜಿಲ್ಲಾಡಳಿತ ಭಾನುವಾರ ಆದೇಶ ಹೊರಡಿಸಿದೆ.
ಬೆಳ್ಳಾರೆ ಮತ್ತು ಸುರತ್ಕಲ್ನಲ್ಲಿ ನಡೆದ ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ತುರ್ತು ಸೇವೆಯನ್ನು ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಜುಲೈ 29ರ ಸಂಜೆ 6 ಗಂಟೆಯಿಂದ ಆಗಸ್ಟ್ 1ರ ಮುಂಜಾನೆ 6 ರವರೆಗೆ ಅಂಗಡಿ-ಮುಂಗಟ್ಟು ಬಂದ್ ಮಾಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದು, ಇದೀಗ ಈ ಆದೇಶವನ್ನು ಆಗಸ್ಟ್ 3ರ ಬೆಳ್ಳಗ್ಗೆ 6ಗಂಟೆಯವರೆಗೆ ಮುಂದುವರೆಸಲಾಗಿದೆ.
ಇನ್ನು ಬೆಳಗ್ಗೆನಿಂದ ಸಂಜೆ 6 ಗಂಟೆಯೊಳಗೆ ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಆದೇಶವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇನ್ನೆರಡು ದಿನಗಳ ಕಾಲ ಮದ್ಯದಂಗಡಿಗಳನ್ನು ಬಂದ್ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ವಿಧಿಸಲಾಗಿದ್ದ ನಿಷೇದಾಜ್ಞೆಯನ್ನು ಆಗಸ್ಟ್ 6ರವರೆಗೆ ವಿಸ್ತರಿಸಲಾಗಿದೆ.
ಆಗಸ್ಟ್ 6ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿಯಲ್ಲಿದ್ದು, ಗುಂಪು ಗೂಡುವುದು, ಸಭೆ, ಮೆರವಣಿಗೆ, ಸಮಾರಂಭಗಳನ್ನು ನಡೆಸುವುದು, ದೈಹಿಕ ಹಿಂಸೆಯನ್ನುಂಟು ಮಾಡುವ ವಸ್ತುಗಳನ್ನು ಒಯ್ಯುವುದು, ಪ್ರತಿಕೃತಿ ಪ್ರದರ್ಶನ, ಸಾರ್ವಜನಿಕ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವಂತಹ ಕೂಗು ಉಚ್ಚರಿಸುವುದು ಸೇರಿದಂತೆ ಯಾವುದೇ ಅಪರಾಧ ಎಸಗುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ಸೂಚಿಸಿದ್ದಾರೆ.