ಸುಳ್ಯ, ಜು 31 (DaijiworldNews/DB): ಪರವಾನಿಗೆ ಇಲ್ಲದೆ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸುಳ್ಯ ಅರಣ್ಯ ಇಲಾಖೆ ಸಿಬಂದಿಯು ನಾಲ್ವರ ವಿರುದ್ದ ಪ್ರಕರಣ ದಾಖಲಿಸಿ, ವಾಹನ ಮತ್ತು ಮರದ ದಿಮ್ಮಿಗಳನ್ನು ವಶಪಡಿಸಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ತಾಲೂಕಿನ ಅಜ್ಜಾವರ ಗ್ರಾಮದ ಮುಂಡೋಳಿಮೂಲೆ ಸಮೀಪದಿಂದ ಹಲಸಿನ ಮರದ ದಿಮ್ಮಿಗಳನ್ನು ಪರವಾನಿಗೆ ಇಲ್ಲದೆ ಸಾಗಿಸಲಾಗುತ್ತಿತ್ತು. ಅರಣ್ಯ ಇಲಾಖೆ ಸಿಬಂದಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಮುಳ್ಯ ಕಜೆ ಎಂಬಲ್ಲಿ ದಿಮ್ಮಿ ಸಾಗಾಟ ಕಂಡು ಬಂದಿತ್ತು. ತತ್ಕ್ಷಣ ವಾಹನವನ್ನು ತಡೆದ ಸಿಬಂದಿ ವಿಚಾರಿಸಿದಾಗ ಪರವಾನಿಗೆ ಇಲ್ಲದೇ ಮರ ಸಾಗಾಟ ಮಾಡುತ್ತಿರುವುದು ಖಚಿತವಾಗಿತ್ತು. ಹೀಗಾಗಿ ಮಹಮ್ಮದ್ ಶಫೀಕ್ ಅಡ್ಕಾರ್, ಸುಂದರ್ ಅಡ್ಕಾರ್, ಫೈಝಲ್ ಅಡ್ಕಾರ್ ಅವರನ್ನು ವಶಕ್ಕೆ ಪಡೆದು ಅವರ ಹೇಳಿಕೆಯಂತೆ ಪ್ರಮುಖ ಆರೋಪಿ ಅಬ್ದುಲ್ ಮಜೀದ್ ನಡುವಡ್ಕ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸುಳ್ಯ ಎಸಿಎಫ್ ಪ್ರವೀಣ್ಕುಮಾರ್ ಶೆಟ್ಟಿ, ರೇಂಜರ್ ಗಿರೀಶ್ ಮಾರ್ಗದರ್ಶನದಲ್ಲಿ ಫಾರೆಸ್ಟರ್ ಯಶೋಧರ, ಸಿಬಂದಿ ದೇವಿಪ್ರಸಾದ್, ಲಿಂಗಪ್ಪ, ಗಂಗಾಧರ್, ಪುರುಷೋತ್ತಮ್ ಭಾಗವಹಿಸಿದ್ದರು.