ವಿಟ್ಲ, ಜ 28 (MSP): ಮಂಗಳೂರಿನ ಕಸಾಯಿಖಾನೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ತಂಡವನ್ನು ಹಿಂದು ಸಂಘಟನೆಯ ಸಹಕಾರದಲ್ಲಿ ವಿಟ್ಲ ಪೊಲೀಸರ ತಂಡ ಪತ್ತೆ ಹಚ್ಚಿ ಒಂದು ದನ, ಎರಡು ಕರು, ಪಿಕಪ್ ವಾಹನ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಮಾಣಿ ಎಂಬಲ್ಲಿ ಜ. 27 ರ ಭಾನುವಾರ ನಡೆದಿದೆ.
ಮಾಣಿ ಸಮೀಪದ ಗಡಿಯಾರ ನಿವಾಸಿ ಕುಖ್ಯಾತ ದನದ ವ್ಯಾಪಾರಿ ಅಬ್ಬಾಸ್ (52) ಬಂಧಿತ ಆರೋಪಿ. ಈತ ಗಡಿಯಾರ ಸರೋಳಿ ಎಂಬಲ್ಲಿದ್ದ ದನಗಳನ್ನು ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾಣಿಯ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಟ್ಲ ಎಸೈ ಯಲ್ಲಪ್ಪ ಅವರ ನೇತೃತ್ವದಲ್ಲಿ ವಾಹನ ಹಾಗೂ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ಬಾಸ್ ಎಂಬಾತನ ಮೇಲೆ ಬಂಟ್ವಾಳ, ಉಪ್ಪಿನಂಗಡಿ, ಪುತ್ತೂರು ಹಾಗೂ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮ ದನಸಾಗಾಟದ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿತ್ತು. ಮಾಣಿ, ಗಡಿಯಾರ, ಬುಡೋಳಿ ಭಾಗದಲ್ಲಿ ಈತ ನಿರಂತರವಾಗಿ ಕಸಾಯಿಖಾನೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ಎಂದು ಹಿಂದೂ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.