ಪುತ್ತೂರು, ಜು 31 (DaijiworldNews/DB): ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಕೇರಳದ ತಲಶ್ಶೇರಿಯಲ್ಲಿ ಈತನನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಪರಲ್ ನಿವಾಸಿ ಅಬೀದ್ ಬಂಧಿತ ಆರೋಪಿ ಎನ್ನಲಾಗಿದೆ. ಪ್ರವೀಣ್ ಹಂತಕರ ಪತ್ತೆಗಾಗಿ ಈಗಾಗಲೇ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದ್ದು, ಈ ತಂಡವು ಕೇರಳದಲ್ಲಿಯೂ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಶನಿವಾರ ಪ್ರಮುಖ ಆರೋಪಿಯನ್ನು ಪೊಲೀಸರ ವಿಶೇಷ ತಂಡವು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಈತ ಚಿಕನ್ ಸೆಂಟರ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರವೀಣ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಸುಳಿವು ದೊರೆತಿತ್ತು. ಹೀಗಾಗಿ ಕೇರಳ ಪೊಲೀಸರ ಸಹಕಾರದೊಂದಿಗೆ ಕರ್ನಾಟಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆತನ ಮನೆಯಲ್ಲೇ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಬಂಧಿತ ಅಬೀದ್ ಸಮಾಜದ ಸ್ವಾಸ್ಥ್ಯ ಕದಡುವ ಹಿನ್ನೆಲೆಯುಳ್ಳ ವಾಟ್ಸಾಪ್ ಗ್ರೂಪ್ವೊಂದರ ಸದಸ್ಯನಾಗಿದ್ದ. ಪ್ರವೀಣ್ ಹತ್ಯೆ ದಿನದಂದು ಜಿಲ್ಲೆಯಲ್ಲಿದ್ದ ಈತ ಬಳಿಕ ತಲಶ್ಶೇರಿಗೆ ತೆರಳಿದ್ದ ಎಂದೂ ಹೇಳಲಾಗುತ್ತಿದೆ. ಪ್ರವೀಣ್ ಹತ್ಯೆ ಸಂಬಂಧ ಈಗಾಗಲೇ ಝಾಕೀರ್ ಮತ್ತು ಶಫೀಕ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಇವರನ್ನು ಆ. ೩ರ ತನಕ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ವಹಿಸಿದೆ. 28 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರ ವಿರುದ್ದ ಆಕ್ರೋಶ
ಪ್ರವೀಣ್ ತನಗೆ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ ಅವರದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಬೆಳ್ಳಾರೆ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಅವರಿಗೆ ಈ ಬಗ್ಗೆ ಹೇಳಲಾಗಿತ್ತಾದರೂ ಅವರು ನಿರ್ಲಕ್ಷ್ಯ ಮಾಡಿದ್ದರು. ಅಲ್ಲದೆ ಹತ್ಯೆಗೂ ಮುನ್ನ ಕೇರಳ ನೋಂದಣಿಯ ವಾಹನ ಬೆಳ್ಳಾರೆಯಲ್ಲಿ ಸಂಚರಿಸುತ್ತಿದ್ದರೂ ಪೊಲೀಸರು ಇದರತ್ತ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.