ವಿಶೇಷ ವರದಿ: ಹರ್ಷಿಣಿ ಉಡುಪಿ
ಉಡುಪಿ, ಜು 30(DaijiworldNews/HR): ಸರಕಾರದ ಯೋಜನೆಗಳು ಕೆಲವೊಮ್ಮೆ ಅಗತ್ಯ ಇರುವ ಗ್ರಾಮಕ್ಕೆ ತಲುಪುವುದಿಲ್ಲ ಎನ್ನುವುದಕ್ಕೆ ಮುದ್ರಾಡಿ ಗ್ರಾಮ ಪಂಚಾಯತ್ ನ ಈ ಪ್ರದೇಶ ಸಾಕ್ಷಿಯಾಗಿದೆ. ಒಂದು ದೇಶದ ಆರ್ಥಿಕ ಅಭಿವೃದ್ಧಿಗೆ ಸಂಪರ್ಕ ರಸ್ತೆ ಸೇತುವೆ, ಸಾರಿಗೆ ವ್ಯವಸ್ಥೆ ತುಂಬಾ ಮುಖ್ಯ. ಆದರೆ ಇಲ್ಲಿಯ ಜನರು ಮಾತ್ರ ಸೇತುವೆ ದಾಟಲು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ.
ಬರೋಬ್ಬರಿ ನಾಲ್ಕು ದಶಕಗಳಿಂದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತ್ತಾವು ಪ್ರದೇಶದ ಜನರ ಸೇತುವೆ ಬೇಡಿಕೆಯ ಕನಸು ನನಸಾಗಲೇ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ಉಡುಪಿಯಲ್ಲಿ ಗ್ರಾಮೀಣ ಭಾಗಕ್ಕೆ ಮಾತ್ರ ಅಧಿಕಾರಿಗಳು, ಜನಪ್ರತಿನಿಧಿಗಳು ತುಂಬಾ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಅಧಿಕಾರಿಗಳು ಇಲ್ಲಿನ ಜನರ ಬೇಡಿಕೆಯನ್ನು ಕಳೆದ 40 ವರ್ಷಗಳಲ್ಲಿ ಒಂದಲ್ಲ ಒಂದು ಕುಂಟು ನೆಪ ಹೇಳುತ್ತಾ, ದಿನ ಮುಂದೂಡುತ್ತಿದ್ದಾರೆ. ಆದರೆ ಇಲ್ಲಿನ ವಾಸಿಗಳಿಗೆ ಅನ್ಯ ಮಾರ್ಗವೇ ಇಲ್ಲ. ಪೇಟೆಗೆ ಬರಲು ಹೊಳೆಯನ್ನು ದಾಟಲೇ ಬೇಕು. ಹಾಗಾಗಿ ಜನರೇ ಒಂದು ಮರದ ಕಾಲು ಸಂಕವನ್ನು ನಿರ್ಮಿಸಿಕೊಂಡು ಓಡಾಡುತ್ತಿದ್ದಾರೆ. ಇಷ್ಟಾಗ್ಯೂ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಸೇತುವೆ ಇಲ್ಲದಿರುವುದರಿಂದ ವಿಪರೀತ ಮಳೆ ಸುರಿದರೇ ಮರದ ಕಾಲು ಸಂಕ ನೀರು ಪಾಲಾಗುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ದಿನನಿತ್ಯ ಬಳಕೆಯ ವಸ್ತುಗಳನ್ನು ಮುಂಗಡ ದಾಸ್ತಾನು ಇರಿಸುವ ಅನಿವಾರ್ಯತೆ ಇಲ್ಲಿನವರದ್ದು.
ಮತ್ತಾವಿನಲ್ಲಿ ಸುಮಾರು 11 ಮಲೆ ಕುಡಿಯ ಕುಟುಂಬಗಳು ವಾಸವಿದ್ದು, ಅವರೆಲ್ಲರೂ ಕೆಲಸಕ್ಕೆಂದು ಕಾರ್ಕಳ, ಹೆಬ್ರಿ ಸೇರಿದಂತೆ ಜಿಲ್ಲೆಯ ಯಾವುದೇ ಊರಿಗೆ ತೆರಳಬೇಕಾದರೂ ಮತ್ತಾವಿನಲ್ಲಿ ಹರಿಯುವ ಹೊಳೆಯನ್ನು ದಾಟಿಕೊಂಡು ಬರಬೇಕಿದೆ. ಆದರೆ ಈ ಹೊಳೆ ದಾಟುವುದು ದುಸ್ಸಾಹಸದ ಕೆಲಸವಾಗಿದೆ
ಈ ಭಾಗದ ಜನರಿಗೆ ರಾತ್ರಿ ವೇಳೆಯಲ್ಲಿ ತೀರಾ ಅನಾರೋಗ್ಯ ಉಂಟಾದರೆ ಕೇಳುವವರೇ ಇಲ್ಲ . ನಿರ್ಜನ ಕಾಡಿನೊಳಗೆ ಯಾವ ಆ್ಯಂಬುಲೆನ್ಸ್ ಬರಲು ಕೇಳುವುದಿಲ್ಲ. ಅಲ್ಲದೇ ಬಂದರೂ ಸೇತುವೆಯಲ್ಲಿ ವಾಹನ ಸಂಚರಿಸಲು ಅಸಾಧ್ಯ. ಮತ್ತಾವಿನಿಂದ ಸೇತುವೆಯನ್ನು ನಡೆದುಕೊಂಡು ದಾಟಿ ರೋಗಿಯಲ್ಲಿ ಕರೆದುಕೊಂಡು ಬರುವಷ್ಟರಲ್ಲಿ ರೋಗಿಯ ಪ್ರಾಣ ಪಕ್ಷಿ ಹಾರಿಹೋದ ಘಟನೆಯೂ ನಡೆದಿದೆ.
ಈ ಪ್ರದೇಶದ ಮತ್ತೊಂದು ಇತಿಹಾಸ:
17 ವರ್ಷಗಳ ಹಿಂದೆ ನಕ್ಸಲರು ಮತ್ತಾವಿನಲ್ಲಿ ನೆಲಬಾಂಬ್ ಸ್ಫೋಟಿಸಿ, ಮೂಲ ಸೌಕರ್ಯ ಕಲ್ಪಿಸಿ ಎಂದು ಪರೋಕ್ಷವಾಗಿ ಈ ಹಳ್ಳಿಯ ವಾಸಿಗರಿಗೆ ಬೆಂಬಲ ನೀಡಿದ್ದರು. ನಂತರದಲ್ಲಿ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿದ್ದ ಸಮಯದಲ್ಲಿ ಹೆಬ್ರಿ, ನಾಡ್ಪಾಲು, ಕಬ್ಬಿನಾಲೆ ಊರುಗಳನ್ನು ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಲಾಯಿತು.
ದಶಕಗಳಿಂದ ಈ ಭಾಗದ ಜನರು ಸೇತುವೆ ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಆದರೆ ಅರಣ್ಯ ಇಲಾಖೆಯ ತೊಡಕಿನಿಂದ ಸೇತುವೆ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ ಎಂದು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಗೌಡ ಹೇಳುತ್ತಾರೆ.
ಒಂದು ವರ್ಷದ ಹಿಂದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸ್ಟೇಟ್ ವೈಲ್ಡ್ ಲೈಫ್ ಇಲಾಖೆಯಲ್ಲಿದ್ದು, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಫ್ರಂಟ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಮಂಡಳಿಯಲ್ಲಿ ಅನುಮೋದನೆ ದೊರಕಬೇಕಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ .
ಕಳೆದ 40 ವರ್ಷದಲ್ಲಿ ಅದೆಷ್ಟು ಜಿಲ್ಲಾಧಿಕಾರಿಗಳು ಉಡುಪಿಗೆ ಬಂದು ಹೋಗಿದ್ದಾರೆ. ಬಂದವರೆಲ್ಲರೂ ಸೇತುವೆ ನಿರ್ಮಿಸುವ ಭರವಸೆಯನ್ನು ಮಾತ್ರ ನೀಡಿದ್ದಾರೆ. ವಿಪರ್ಯಾಸವೆಂದರೆ ಜನಪ್ರತಿನಿಧಿಗಳಿಗೆ ಇಚ್ಛಾ ಶಕ್ತಿಯಿಲ್ಲ, ಸರಕಾರದ ಮಟ್ಟದಲ್ಲಿ ಏನಾದರೂ ತುರ್ತಾಗಿ ನಿಯಮ ಬರಬೇಕಿದ್ದರೆ ರಾತ್ರೋರಾತ್ರಿ ಬಿಲ್ ಪಾಸ್ ಆಗುತ್ತದೆ. ಆದರೆ ಇಂತಹ ಸಮಾಜದಲ್ಲಿ ಅತ್ಯಂತ ತಳ ಮಟ್ಟದಲ್ಲಿ ಬದುಕುವ ಗ್ರಾಮೀಣ ಜನರು ಇಂತಹ ಚಿಕ್ಕ ಪುಟ್ಟ ಬೇಡಿಕೆಗಳನ್ನಿಟ್ಟುಕೊಂಡು ಸರಕಾರದ ಮುಂದಿಟ್ಟುಕೊಂಡು ಕಾದು ಕಾದು ಅವರ ಜೀವನ ಕಳೆದೆ ಹೋಗುತ್ತದೆ. ಇನ್ನು ಅಧಿಕಾರಿಗಳು ಪ್ರಸ್ತಾವನೆಯನ್ನು ಫೈಲ್ ಒಳಗಡೆ ಇಟ್ಟು ಮರೆತೇ ಹೋಗುತ್ತಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಆದಷ್ಟು ಬೇಗ ಸೂಕ್ತ ಕ್ರಮ ತೆಗೆದು ಕೊಳ್ಳುವುದು ಅಗತ್ಯ.