ಉಡುಪಿ, ಜು 30(DaijiworldNews/HR): ಸಜ್ಜನ ಮುಸಲ್ಮಾನ ಬಾಂಧವರು ಜಾಗೃತರಾಗಬೇಕು. ಎಸ್ಡಿಪಿಐ, ಪಿಎಫ್ಐ ಸಂಘಟನೆಗಳು ಇಡೀ ಅಲ್ಪಸಂಖ್ಯಾತರನ್ನು ಸಂಶಯ ದೃಷ್ಟಿಯಿಂದ ನೋಡುವಂತ ಸಮಯ ನಿರ್ಮಾಣವಾಗಿದೆ. ಅಂತಹ ಸಂಘಟನೆಗಳಲ್ಲಿ ಇರುವವರನ್ನ ನಿಮ್ಮ ಸಮಾಜದಿಂದ ದೂರ ಇಡಿ, ಅಥವಾ ಬಹಿಷ್ಕಾರ ಮಾಡಿ. ಇದನ್ನು ಈ ಹಿಂದೆ ಹಿಜಾಬ್ ವಿವಾದ ಇರುವಾಗಲೇ ಹೇಳಿತ್ತು. ಅದೇ ರೀತಿ ಈ ಸಂಘಟನೆಗಳೊಂದಿಗೆ ಕೈ ಜೋಡಿಸದಿದ್ದರೆ ಸ್ವಾಸ್ಥ್ಯ ಸಮಾಜವನ್ನು ಕಾಪಾಡಬಹುದಾಗಿದೆ. ನಮ್ಮದು ಜಾತ್ಯತೀತ ರಾಷ್ಟ್ರ, ಜೊತೆಯಾಗಿ ಬಾಳಬೇಕಾಗುತ್ತದೆ. ಸಂಶಯ ಸ್ವಾಭಾವಿಕವಾಗಿ ಮೂಡುತ್ತಿದೆ. ಮುಸ್ಲಿಂ ಸಮುದಾಯವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರವೀಣ್ ನೆಟ್ಟಾರು ಕೊಲೆಯ ನಂತರ ಬಿಜೆಪಿಯ ಕಾರ್ಯಕರ್ತರು ಬಹಳ ಆತಂಕದಲ್ಲಿದ್ದರು. ಜಿಹಾದಿ ಪ್ರವೃತ್ತಿಯ ವ್ಯಕ್ತಿಗಳಿಂದ ಯಾವುದೇ ಸಮಾಜ ಘಾತುಕಕೃತ್ಯಗಳಲ್ಲಿ ಭಾಗಿಯಾಗದಿರುವ ಸಾಮಾಜಿಕ ಕಾರ್ಯಕ್ರತರನ್ನ, ಅಮಾಯಕರನ್ನು ಹತ್ಯೆ ಮಾಡಿದ್ದೂ ದುರದೃಷ್ಟಕರ. ಎಲ್ಲರ ಬೇಡಿಕೆಯಂತೆ ತನಿಖೆಯನ್ನು ಎನ್ಐಎ ಗೆ ಒಪ್ಪಿಸಿದೆ. ಈ ಕೃತ್ಯದ ಹಿಂದಿನ ಷಡ್ಯಂತ್ರ ಮುಂದಿನ ಷಡ್ಯಂತ್ರಗಳು ತನಿಖೆಯ ಮೂಲಕ ಹೊರಬೀಳಬಹುದು ಎಂಬ ನಿರೀಕ್ಷೆಯಿದೆ ಎಂದರು.
ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾಗುವಾಗಲೇ ಅಂತಾರಾಷ್ಟ್ರೀಯ ಮಟ್ಟದ ಕೈವಾಡವಿದೆ. ಮುಂದೆ ಇಂತಹ ಕೃತ್ಯ ನಡಿಲಿಕ್ಕಿದೆ ಎಂಬ ಸಂಶಯ ವ್ಯಕ್ತಪಡಿಸಿತ್ತು. ಆದರೆ ಜೀವಹಾನಿ, ಕೊಲೆ ಮಾಡುವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ಅಂದುಕೊಂಡಿರಲಿಲ್ಲ. ದೇಶಕ್ಕೆ ಬಹಳ ಆತಂಕದ ವಿಷಯ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರಕಾರ ಅದನ್ನು ಮಟ್ಟ ಹಾಕ್ಲಿಕ್ಕೆ ಬೇಕಾದ ಕಠಿಣ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದಿದ್ದಾರೆ.
ಇನ್ನು ಯಾವುದೇ ಕಾರ್ಯಕರ್ತನ ಜೀವ ಬಿಜೆಪಿಗೆ ಅಮೂಲ್ಯವಾದುದು. ಈ ಕೃತ್ಯವನ್ನು ಯಾರು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗುವಂತೆ ನಮ್ಮ ಆಗ್ರಹವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶಾತಿ ಬಗೆಗೆ ಪ್ರಶ್ನೆಗೆ ಉತ್ತರಿಸಿದ ಶಾಸಕ ಭಟ್, ಹೆಚ್ಚಿದ್ದು, ಹಿಜಾಬ್ ತೆಗೆದು ತರಗತಿಯಲ್ಲಿ ಪಾಠ ಕೇಳುತ್ತಾರೆ. ಹಿಜಾಬ್ ವಿವಾದ ಸೃಷ್ಟಿಸಿದ ಆರು ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಇತರ ವಿದ್ಯಾರ್ಥಿಗಳು ಹಿಂದಿನಂತೆ ಶಿಸ್ತಿನಿಂದ ಬರುತ್ತಿದ್ದಾರೆ ಎಂದರು