ಬೈಂದೂರು, ಜು 30(DaijiworldNews/HR): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವ್ಯವಸ್ಥೆಯನ್ನು ಖಂಡಿಸಿ ಶಿರೂರು ಗ್ರಾಮಸ್ಥರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿ, ಐ ಆರ್ ಬಿ ಕಚೇರಿಗೆ ಮುತ್ತಿಗೆ ಹಾಕಿದರು.
ಶಿರೂರು ಪೇಟೆಯಿಂದ ಆರಂಭವಾದ ಬೃಹತ್ ಪ್ರತಿಭಟನೆಯೂ, ಸುಂಕ ವಸುಲಾತಿ ಕೇಂದ್ರದವರಗೆ ಆಗಮಿಸಿ ಪ್ರತಿಭಟನಾ ಸಭೆ ನಡೆಸಲಾಗಿದ್ದು, ನಂತರ 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಐ.ಆರ್.ಬಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೋಲಿಸರು ಪ್ರತಿಭಟನಾಕಾರರನ್ನು ತಡೆದರು. ತಹಶೀಲ್ದಾರ್ ಕಿರಣ್ ಗೋರಯ್ಯ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು.
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಗೋಪಾಲ ಪೂಜಾರಿಯವರು ಕೇವಲ ಟೋಲ್ ವಸೂಲಾತಿ ಮಾಡುವುದನ್ನು ಬಿಟ್ಟರೇ ಐ.ಆರ್.ಬಿ ಯವರು ಜನರ ಹಿತವನ್ನು ಕಾಪಾಡಲು ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಟೋಲ್ ಲೇನ್ ನಲ್ಲಿ ದನ ಮಲಗಿದ್ದು, ಆ್ಯಂಬುಲೆನ್ಸ್ ಅಪಘಾತವಾದದ್ದು ಟೋಲ್ ನವರು ನಿರ್ಲಕ್ಷ್ಯಕ್ಕೆ ಸಾಕ್ಷಿ. ಹೆದ್ದಾರಿಯ ಉದ್ದಕ್ಕೂ ಮರಣ ಗುಂಡಿಗಳು ಬಾಯ್ತೆರೆದಿದೆ. ಆದರೆ ಯಾವುದೆ ಅಧಿಕಾರಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರ ಬಗ್ಗೆ ಗಮನ ಹರಿಸದೇ ಇರುವುದು ಶೋಚನೀಯ ಎಂದು ಕಿಡಿಕಾರಿದರು.
ಬೈಂದೂರು ಕ್ಷೇತ್ರ ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಈಗಾಗಲೇ ಸಂಸದರು ಹಾಗೂ ಶಾಸಕರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಬೈಂದೂರು ಕ್ಷೇತ್ರದ ಹೆದ್ದಾರಿ ಸಮಸ್ಯೆ ಕುರಿತು ತಿಳಿಸಿದ್ದಾರೆ ಮತ್ತು ಅಧಿಕಾರಿಗಳು ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.ಜನರ ಬೇಡಿಕೆಗೆ ಸ್ಪಂಧಿಸಿ ಹೆದ್ದಾರಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದರೆ ಮುಂದಿನ ದಿನದಲ್ಲಿ ಸಾರ್ವಜನಿಕರಿಂದ ಉಗ್ರ ಪ್ರತಿಭಟನೆ ನಡೆಯುತ್ತದೆ. ಹೀಗಾಗಿ ಜನರ ತಾಳ್ಮೆ ಪರೀಕ್ಷಿಸದಂತೆ ಕ್ರಮಕೈಗೊಳ್ಳಬೇಕು ಎಂದರು.
ಇನ್ನು ಸ್ಥಳೀಯರ ಬೇಡಿಕೆಗಳಿಗೆ ಹೆದ್ದಾರಿ ಪ್ರಾಧಿಕಾರ ಮತ್ತು ಐ.ಆರ್.ಬಿ ಕಂಪೆನಿಯಿಂದ ಸಮಪರ್ಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾ ಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಐ.ಆರ್.ಬಿ ಅಧಿಕಾರಿಗಳು ಸ್ಥಳಕ್ಕಾಗಿಸಬೇಕೆಂದು ಪಟ್ಟು ಹಿಡಿದರು. ಬಳಿಕ ಸಮಾಧಾನಗೊಳ್ಳದ ಪ್ರತಿಭಟನಾಗಾರರು ಇದು ಮೊದಲನೇ ಬಾರಿ ಪ್ರತಿಭಟನೆಯಲ್ಲ. ಈಗಾಗಲೇ ನಾಲ್ಕೈದು ಬಾರಿ ಪ್ರತಿಭಟನೆಯಾಗಿದೆ. ಮನವಿ ನೀಡಿದ ತಕ್ಷಣ ಮನವಿ ಸ್ವೀಕರಿಸಿದ ಬಳಿಕ ಅಧಿಕಾರಿಗಳು ಯಾವುದೇ ಸ್ಪಂಧನೆ ನೀಡುವುದಿಲ್ಲ ಇದರಿಂದ ಸಾರ್ವಜನಿಕರು ರೋಶಿ ಹೋಗಿದ್ದಾರೆ. ಈ ಬಾರಿ ಸಮಪರ್ಕವಾದ ಸ್ಪಂಧನೆ ಲಿಖಿತ ರೂಪದಲ್ಲಿ ನೀಡಬೇಕು ಎಂದರು.
ಬಳಿಕ ಸ್ಪಂಧಿಸಿದ ಅಧಿಕಾರಿಗಳು ಇಲಾಖಾ ವ್ಯಾಪ್ತಿಯಲ್ಲಿ ಅವಕಾಶವಿರುವ ಬೇಡಿಕೆಗಳನ್ನು ಈಡೇರಿಸುತ್ತೇವೆ ಮತ್ತು ಅಗತ್ಯ ಕಾಮಗಾರಿಗಳನ್ನು ನಾಳೆಯಿಂದಲೇ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೆಲಹೊತ್ತು ಐ.ಆರ್.ಬಿ ಅಧಿಕಾರಿಗಳು ಹಾಗೂ ಪ್ರತಿಟನಕಾರರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಬಳಿಕ ಐ.ಆರ್.ಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಂತರ ಪೋಲಿಸರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್,ಐ.ಆರ್.ಬಿ ಅಧಿಕಾರಿ ಶ್ರೀನಿವಾಸ,ಟೋಲ್ ಜನರಲ್ ಮೆನೇಜರ್ ಗಂಗಾಧರ ಫಾಯ್ಕ್ರ್,ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್,ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ಪವನ್ ನಾಯಕ್,ಜಿ.ಪಂ ಮಾಜಿ ಸದಸ್ಯ ಎಸ್.ರಾಜು ಪೂಜಾರಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಶಿರೂರು ಗ್ರಾ.ಪಂ ಅಧ್ಯಕ್ಷೆ ಜಿ.ಯು ದಿಲ್ಶಾದ್ ಬೇಗಂ,ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಕಾಂಗ್ರೆಸ್ ಮುಖಂಡ ಮದನ್ ಕುಮಾರ್,ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ವಕೀಲರಾದ ಲಿಂಗಪ್ಪ್ ಶಿರೂರು, ಗ್ರಾ.ಪಂ ಸದಸ್ಯರು ಹಾಗೂ ಪೊಲೀಸ್ ಇಲಾಖೆಯ ಸಿಬಂದಿಗಳು ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶೋಯಿಬ್ ಅರೆಹೊಳೆ ಕಾರ್ಯಕ್ರಮ ನಿರ್ವಹಿಸಿದರು.ರಘುರಾಮ ಕೆ.ಪೂಜಾರಿ ವಂದಿಸಿದರು.