ಮಂಗಳೂರು, ಜು 30(DaijiworldNews/HR): ನಗರದಲ್ಲಿ ಮುಂಜಾವಿನ ವೇಳೆ ಸುರಿದ ವಿಪರೀತವಾದ ಮಳೆಯಿಂದ ಕೆಲವೆಡೆ ರಾಜಕಾಲುವೆಗಳಲ್ಲಿ ಮಳೆ ನೀರು ಉಕ್ಕಿ ಹರಿದ ಕಡೆಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಹಲವಾರು ದಿನಗಳ ಹಿಂದೆ ವಾರಕ್ಕೂ ಅಧಿಕ ನಿರಂತರವಾಗಿ ಸುರಿದ ಭಾರಿ ಮಳೆಯಲ್ಲೂ ಕೃತಕ ನೆರೆಯ ಹಾವಳಿ ಉಂಟಾಗದಿರುವುದನ್ನು ನಾವು ಕಂಡಿದ್ದೇವೆ. ಆದರೆ ನಿನ್ನೆ ಬೆಳಗ್ಗೆ ಸುರಿದ ವಿಪರೀತ ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಕಡಲಿನ ಬರತ ಹೆಚ್ಚಿದ ಕಾರಣ ರಾಜಕಾಲುವೆಗಳಲ್ಲಿ ಹರಿಯುವ ನೀರು ನದಿ, ಸಮುದ್ರ ಸೇರದೆ ಹಿಮ್ಮುಖವಾಗಿ ಹರಿದು ರಾಜಕಾಲುವೆಗಳಿಂದ ಉಕ್ಕಿಹರಿದ ಕಾರಣ ಈ ಸಮಸ್ಯೆ ಉಂಟಾಗಿದೆ. ಸಾರ್ವಜನಿಕ ಆಸ್ತಿಗಳಿಗೆ ನಷ್ಟವಾಗಿರುವ ಕಡೆಗಳಲ್ಲಿ ನಾನು, ಮೇಯರ್, ಪಾಲಿಕೆ ಸದಸ್ಯರು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಸರಕಾರದಿಂದ ಕೊಡಲಾಗುವ ಪರಿಹಾರ ಧನ ಬಿಡುಗಡೆಗೆ ಸೂಚನೆ ನೀಡಿದ್ದೇನೆ ಎಂದರು.
ಮಳೆಯಿಂದ ಹಾನಿಗೀಡಾದ ಮನೆಗಳಿಗೆ ನಮ್ಮ ಆಡಳಿತದ ರಾಜ್ಯ ಸರಕಾರವು ಗರಿಷ್ಠ ಪ್ರಮಾಣದ ಪರಿಹಾರ ಧನ ಘೋಷಿಸಿದೆ. ಈ ಹಿಂದೆ ಸಂಪೂರ್ಣ ಮನೆ ಹಾನಿಯಾದರೆ 95,100 ಸಾವಿರ ಪರಿಹಾರ ಮೊತ್ತ ನೀಡಲಾಗುತಿತ್ತು. ಮಳೆಯ ನೀರು ಮನೆಗಳಿಗೆ ನುಗ್ಗಿದರೆ ಯಾವುದೇ ಪರಿಹಾರ ನೀಡಲಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ನಮ್ಮ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ಪರಿಹಾರ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದೆ. ಮುಖ್ಯಮಂತ್ರಿಗಳು ಸಂಪೂರ್ಣ ಮನೆ ಹಾನಿಯಾದರೆ 5 ಲಕ್ಷ ರೂಪಾಯಿ ಪರಿಹಾರ, ಭಾಗಶಃ ಹಾನಿಯಾದರೆ ಗರಿಷ್ಠ ಪ್ರಮಾಣದ ಪರಿಹಾರ ಹಾಗೂ ಮಳೆ ನೀರು ಮನೆಗೆ ನುಗ್ಗಿ ಸೊತ್ತು ನಷ್ಟ ಉಂಟಾದರೆ 10 ಸಾವಿರ ಪರಿಹಾರ ಘೋಷಿಸಿದ್ದಾರೆ ಎಂದರು.
ಗ್ರಾಮಕರಣಿಕರು (ವಿಎ) ನಿಮ್ಮ ಮನೆಗೆ ಪರಿಶೀಲನೆಗಾಗಿ ಬಂದ ಸಂದರ್ಭದಲ್ಲಿ ಮಳೆನೀರು ಮನೆಗೆ ನುಗ್ಗಿರುವ ಭಾವಚಿತ್ರ ಅಥವ ಮಳೆ ನೀರು ಹರಿದುಹೋದ ಬಳಿಕ ಅದರ ಅಚ್ಚು ಅಥವ ಕುರುಹುಗಳು ಇದ್ದಲ್ಲಿ ಅದರ ಭಾವಚಿತ್ರ ಪ್ರತಿಗಳನ್ನು ನೀಡಬೇಕು. ಆಧಾರ್ ಕಾರ್ಡ್ ಪ್ರತಿ ಹಾಗೂ ಬ್ಯಾಂಕ್ ಖಾತೆಯ ಪ್ರತಿ ನೀಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಸರಕಾರದ ಪರಿಹಾರ ಧನ 10 ಸಾವಿರ ರೂಪಾಯಿ ನೇರವಾಗಿ ಜಮೆಯಾಗುತ್ತದೆ. ಯಾರದಾದರೂ ಮನೆಗೆ ನೀರು ನುಗ್ಗಿದರೆ ಅಥವ ಮನೆ ಸಂಪೂರ್ಣ ಹಾನಿಯಾಗಿದ್ದರೆ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಾನಿಯುಂಟಾದವರು ಗ್ರಾಮಕರಣಿಕ, ಪಾಲಿಕೆ ಸದಸ್ಯರು ಅಥವ ನನ್ನ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ನಗರಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ 70 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ ನಗರ ಭಾಗಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ದೊರಕಿರುವುದು ಇದೇ ಮೊದಲ ಬಾರಿಗೆ. ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿಗಳು ನಡೆಯುತಿದ್ದು 25 ಕೋಟಿಯ ಕಾಮಗಾರಿಗಳಷ್ಟೇ ಪೂರ್ಣಗೊಂಡಿದೆ. ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಕೆಲ ಭಾಗಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ರಾಜಕಾಲುವೆಯಲ್ಲಿ ನಿರಂತರವಾಗಿ ನೀರಂ ಹರಿಯುವ ಕಾರಣ ಕಾಮಗಾರಿ ಸ್ಥಗತಿಗೊಳಿಸಲಾಗಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಪ್ರಾರಂಭಿಸಿ ಡಿಸೆಂಬರ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ದಿನಗಳಲ್ಲಿ ಕೃತಕ ನೆರೆ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕಾಮತ್ ಹೇಳಿದ್ದಾರೆ.