ಉಡುಪಿ, ಜು 30 (DaijiworldNews/DB): ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ಖಂಡಿಸಿ ಕೊಡವೂರಿನ ಗ್ರಾಮಸ್ಥರು ಅಂಗಡಿ ಮುಂಗಡಿಗಳನ್ನು ಮುಚ್ಚಿ ಶನಿವಾರ ಸ್ವಯಂ ಪ್ರೇರಿತ ಬಂದ್ ನಡೆಸಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಬಂದ್ ಮಾಡಲು ವಿನಂತಿಸಿ ಶುಕ್ರವಾರ ಮೆಸೇಜ್ ಮೂಲಕ ಕರಪತ್ರ ಸಂದೇಶ ಕಳುಹಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಅಂಗಡಿಗಳ ಮಾಲಕರು ಸ್ವಯಂಪ್ರೇರಿತವಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಕೈ ಜೋಡಿಸಿದರು. ರಿಕ್ಷಾ ಚಾಲಕರು ಮತ್ತು ಮಾಲಕರು ಕೂಡಾ ಬಂದ್ಗೆ ಕೈ ಜೋಡಿಸಿದ್ದರು. ಹೀಗಾಗಿ ಅಟೋರಿಕ್ಷಾಗಳೂ ಕೂಡಾ ರಸ್ತೆಗಿಳಿದಿರಲಿಲ್ಲ. ಪ್ರತಿದಿನ ಜನರಿಂದ ತುಂಬಿ ತುಳುಕುತ್ತಿದ್ದ ಕೊಡವೂರು ಪೇಟೆಯಲ್ಲಿ ಅಂಗಡಿಗಳ ಬಂದ್ನಿಂದ ಜನರ ಓಡಾಟವೂ ಇರಲಿಲ್ಲ. ಹೀಗಾಗಿ ಇಡೀ ಪೇಟೆ ಬಿಕೋ ಎನ್ನುತ್ತಿತ್ತು.
ಪ್ರತಿ ಸಮಯವೂ ಈ ರೀತಿಯ ಘಟನೆಗಳಾದಾಗ ಖಂಡಿಸುತ್ತೇವೆ, ಪ್ರತಿಭಟನೆ ಮಾಡುತ್ತೇವೆ, ಉಗ್ರ ಹೋರಾಟ ಮಾಡುತ್ತೇವೆ ಎಂದೆಲ್ಲಾ ಮಾತುಗಳನ್ನು ಆಡಿ ಸುಸ್ತಾಗಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗಬಾರದು. ಹೀಗಾಗಿ ನಾವೇ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡಿರುತ್ತೇವೆ ಎಂದು ಕೊಡವೂರಿನ ಹಿರಿಯರು ಮತ್ತು ಅಂಗಡಿ ಮಾಲಕರು ಹೇಳಿದ್ದಾರೆ.
ಈ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲವಾದರೆ ಖಂಡಿತವಾಗಿಯೂ ಉಡುಪಿ ಬಂದ್ ಗೆ ನಾವು ಕರೆ ಕೊಡುತ್ತೇವೆ ಎಂದು ಕೊಡವೂರಿನ ನಾಗರಿಕರು ತಿಳಿಸಿದ್ದಾರೆ.
ಇನ್ನಾದರೂ ಅಮಾಯಕರ ಹಿಂದೂ ಕಾರ್ಯಕರ್ತರ ಕೊಲೆ ನಿಲ್ಲಲಿ. ಸರ್ಕಾರ ಎಚ್ಚೆತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಿ ಎಂದು ಹಿರಿಯರು ಆಗ್ರಹಿಸಿದ್ದಾರೆ.