ಮಂಗಳೂರು, ಜು 30 (DaijiworldNews/DB): ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯವು ಐದು ದಿನಗಳ ಕಸ್ಟಡಿಗೆ ಒಪ್ಪಿಸಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಗೌಪ್ಯ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಪ್ರವೀಣ್ ಹತ್ಯೆ ನಡೆದ ಒಂದೇ ದಿನದಲ್ಲಿ ಆರೋಪಿಗಳಾದ ಜಾಕಿರ್ ಮತ್ತು ಶಫೀಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದರು. ನ್ಯಾಯಾಲಯವು ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ಬೆಳ್ಳಾರೆಯಲ್ಲಿ ಮಸೂದ್ ಕೊಲೆ ನಡೆದ ಎರಡು ದಿನಗಳ ಬಳಿಕ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕ,ರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಈ ಹತ್ಯೆಯು ಇಡೀ ಕರಾವಳಿಯನ್ನೇ ಕೆರಳಿಸಿತ್ತಲ್ಲೇ, ಬಳಿಕ ಪ್ರತಿಭಟನೆಯ ಕಿಚ್ಚು ರಾಜ್ಯದ ವಿವಿಧೆಡೆಗೂ ಹರಡಿತ್ತು. ಆರೋಪಿಗಳ ಶೀಘ್ರ ಬಂಧನ ಮತ್ತು ಕಠಿಣ ಕ್ರಮಕ್ಕಾಗಿ ಒತ್ತಾಯಿಸಿ ಹಿಂದೂಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳಾದ ಜಾಕಿರ್ ಮತ್ತು ಶಫೀಕ್ನನ್ನು ಘಟನೆ ನಡೆದ ಒಂದೇ ದಿನದಲ್ಲಿ ಬಂಧಿಸಿದ್ದರು. ಚಿಕನ್ ಸ್ಟಾಲ್ ನಡೆಸುತ್ತಿದ್ದ ಇನ್ನೊಬ್ಬ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಶುಕ್ರವಾರ ಲಭ್ಯವಾಗಿದೆ. ಹತ್ಯೆ ಆರೋಪಿಗಳಿಗೆ ಸಹಕರಿಸಿದ ಆರೋಪ ಈ ಮೂವರ ಮೇಲಿದ್ದು, ಹಂತಕರ ಪತ್ತೆಗೆ ಕೇರಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಮಾಂಸದಂಗಡಿ ವೈಮನಸ್ಸು
ಬೆಳ್ಳಾರೆಯಲ್ಲಿ ಮೀನು ಮಾರುಕಟ್ಟೆ ಏಲಂನಲ್ಲಿ ಹಿಂದೂ ಸಮುದಾಯಕ್ಕೆ ಸೇರಿದವರು ಮಾರುಕಟ್ಟೆಯನ್ನು ಪಡೆದಿದ್ದು, ಇದು ಎರಡು ಕೋಮುಗಳ ನಡುವೆ ವೈಮನಸ್ಯ ಮೂಡಲು ಕಾರಣವಾಗಿತ್ತು ಎನ್ನಲಾಗಿದೆ. ಅಲ್ಲದೆ, ಈ ಮಾರುಕಟ್ಟೆ ಹಿಂದು ಸಮುದಾಯದವರು ಪಡೆದುಕೊಳ್ಳುವಲ್ಲಿ ಪ್ರವೀಣ್ ಬೆಂಬಲ ನೀಡಿದ್ದು, ಇದಕ್ಕೆ ವಿದೇಶದಿಂದ ಅವರಿಗೆ ಬೆದರಿಕೆ ಕರೆಯೂ ಬಂದಿತ್ತೆನ್ನಲಾಗಿದೆ. ಆದರೆ ಈ ಕರೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಪ್ರವೀಣ್ ಕೆಲ ಸಮಯದ ನಂತರ ಸ್ವತಃ ಚಿಕನ್ ಸೆಂಟರ್ ಆರಂಭ ಮಾಡಿದ್ದರು. ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು ಎಂಬುದನ್ನು ಪ್ರವೀಣ್ ಸಹೋದರ ರಂಜಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಹೋದರನ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯ ಮಗನೇ ಈ ರೀತಿಯ ಸಂಚು ಮಾಡುತ್ತಾನೆ ಅಂದುಕೊಂಡಿರಲಿಲ್ಲ. ಬಂಧಿತರಾದ ಯಾವುದೇ ಆರೋಪಿಗಳಿಗೆ ಜಾಮೀನು ನೀಡಬಾರದು. ಆರು ತಿಂಗಳು ಬಂಧಿಸಿ ಮತ್ತೆ ಬಿಡುವಂತಹ ಕೆಲಸ ಮಾಡಬಾರದು. ಅವರಿಗೆ ಮರಣದಂಡನೆ ಶಿಕ್ಷೆಯನ್ನೇ ವಿಧಿಸಬೇಕು ಎಂದು ಮೃತ ಪ್ರವೀಣ್ ಸಹೋದರಿ ನಳಿನಿ ಒತ್ತಾಯಿಸಿದ್ದಾರೆ.