ಉಡುಪಿ, ಜ27(SS): ಬಾರಕೂರಿನಲ್ಲಿ ಆಳುಪೋತ್ಸವ ಉದ್ಘಾಟನಾ ಸಮಾರಂಭ ಮುಗಿಸಿ ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ದಾರಿ ಮಧ್ಯೆ ಕಂಡ ಯಕ್ಷಗಾನ ಪ್ರದರ್ಶನವನ್ನು ಜನರೊಂದಿಗೆ ಸಾಮಾನ್ಯ ಪ್ರೇಕ್ಷಕರಂತೆ ಕುಳಿತು ವೀಕ್ಷಿಸಿದ ಸುದ್ದಿ ವರದಿಯಾಗಿದೆ.
ಅಳುಪೋತ್ಸವ ಉದ್ಘಾಟನಾ ಸಮಾರಂಭ ಭಾಗವಹಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ರಾತ್ರಿ 10 ಗಂಟೆ ಸುಮಾರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉಡುಪಿಗೆ ಹೊರಟಿದ್ದರು. ಈ ವೇಳೆ ಬಾರಕೂರಿನಿಂದ ಬ್ರಹ್ಮಾವರ ಮಾರ್ಗವಾಗಿ ಸಾಗುವಾಗ ಬಾರಕೂರು ಸೇತುವೆ ಸಮೀಪದ ರಸ್ತೆ ಬದಿಯ ಗದ್ದೆಯಲ್ಲಿ ಯಕ್ಷಗಾನ ನಡೆಯುತ್ತಿರುವುದು ಗಮನಿಸಿದರು. ತಕ್ಷಣವೇ ತನ್ನ ಕಾರನ್ನು ನಿಲ್ಲಿಸಿದ ಸಚಿವರು ಯಕ್ಷಗಾನದ ಗದ್ದೆಯತ್ತ ನಡೆದರು.
ರಾತ್ರಿ ವೇಳೆಯಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಚಿವರನ್ನು ಕಂಡ ಗ್ರಾಮಸ್ಥರು ಸಂತಸಗೊಂಡರು. ಬಳಿಕ ಸಚಿವರು ಸ್ಥಳೀಯ ಗ್ರಾಮಸ್ಥರ ಜೊತೆಗೆ ಕುಳಿತು ಹಾಲಾಡಿ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ “ಶ್ರೀಕೃಷ್ಣಾರ್ಜುನ” ಯಕ್ಷಗಾನ ಪ್ರಸಂಗವನ್ನು ಸುಮಾರು ಒಂದೂವರೆ ತಾಸು ವೀಕ್ಷಿಸಿದರು.
ಅನಿರೀಕ್ಷಿತವಾಗಿ ಆಗಮಿಸಿದ ಸಚಿವೆ ಜಯಮಾಲರನ್ನು ಪ್ರಸಂಗದ ಮಧ್ಯಂತರದಲ್ಲಿ ವೇದಿಕೆಗೆ ಆಹ್ವಾನಿಸಿ ಕಲಾವಿದರು ಹಾಗೂ ಯಕ್ಷಗಾನ ಮಂಡಳಿಯಿಂದ ಅಭಿನಂದಿಸಲಾಯಿತು.