ಮಂಗಳೂರು, ಜು 30 (DaijiworldNews/MS): ಸುರತ್ಕಲ್ನ ಮಂಗಳಪೇಟೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಮುಹಮ್ಮದ್ ಫಾಝಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುರತ್ಕಲ್, ಬಜಪೆ, ಪಣಂಬೂರು, ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 21 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಡಿಜಿಪಿ ಆಲೋಕ್ ಕುಮಾರ್ ಸ್ವತಃ ತನಿಖೆಯ ಉಸ್ತುವಾರಿ ವಹಿಸಿದ್ದು, ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ. ಇದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಹಿಂದೆ ಜಿಲ್ಲೆಯಲ್ಲಿ ಡಿಸಿಪಿಯಾಗಿದ್ದ, ಪ್ರಸ್ತುತ ಹಾಸನ ಎಸ್ಪಿ ಆಗಿರುವ ಹರಿರಾಂ ಶಂಕರ್ ಅವರನ್ನೂ ಮತ್ತೆ ತನಿಖೆಗಾಗಿ ಕರೆಯಿಸಲಾಗಿದೆ.
" ನಾವು ಇಲ್ಲಿಯವರೆಗೆ 21 ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ . ಇವರೆಲ್ಲರೂ ಶಂಕಿತರಾಗಿದ್ದು ವಿಚಾರಣೆ ನಡೆಸುತ್ತಿದ್ದೇವೆ. ನಮಗೆ ಸಂಸ್ಥೆ, ಸಂಘಟನೆಗಳು ಯಾವುದೇ ಇತರ ಲಿಂಕ್ ನಮಗೆ ಮುಖ್ಯವಲ್ಲ. ಹಂತಕರನ್ನು ಬಂಧಿಸುವುದು ನಮ್ಮ ಮೊದಲ ಆದ್ಯತೆ " ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೊಬೈಲ್ ಕರೆಗಳ ಮಾಹಿತಿ , ಯಾವ ಕಾರಣಕ್ಕೆ ಕೊಲೆ ನಡೆದಿದೆ, ಪ್ರವೀಣ್ ಹತ್ಯೆಗೂ ಇದಕ್ಕೂ ಏನಾದರೂ ಸಂಬಂಧ ಇದೆಯೇ , ಸಿಸಿಟಿವಿ ಫೂಟೇಜ್ ಎಲ್ಲ ಮಾಹಿತಿ ಕ್ರೋಡಿಕರಿಸಿ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ.