ಮಂಗಳೂರು, ಜು 30 (DaijiworldNews/MS): ಕರಾವಳಿಯಲ್ಲಿ ಹತ್ತು ದಿನಗಳಲ್ಲಿ ಮೂವರು ಯುವಕರು ಕೋಮುವಾದಿ ಶಕ್ತಿಗಳಿಂದ ಹತ್ಯೆಗೀಡಾಗಿದ್ದು, ನಿಷ್ಕಲ್ಮಶ ಜೀವಗಳ ಸಾವು ನಿಜಕ್ಕೂ ಕರುಳನ್ನು ಹಿಂಡುವಂತಿದೆ. ಗುರುವಾರ ರಾತ್ರಿ ದುಷ್ಕರ್ಮಿಗಳ ತಂಡದಿಂದ ಹತ್ಯೆಯಾದ, ತನ್ನ ಪಾಡಿಗೆ ತಾನಿದ್ದ ೨೩ ವರ್ಷದ ಯುವಕ ಮುಹಮ್ಮದ್ ಫಾಝಿಲ್ ರನ್ನು ಹಂತಕರು ಗುರಿಯಾಗಿಸಿಕೊಂಡದ್ದೇಕೆ ಎನ್ನುವುದೇ ಸದ್ಯ ಪ್ರಶ್ನೆಯಾಗಿ ಕಾಡುತ್ತಿದೆ.
ಮಂಗಲಪೇಟೆಯ ನಿವಾಸಿ ಫಾರೂಕ್ ಮತ್ತು ಜೈನಾಬಿ ದಂಪತಿಗಳ ೨ ನೇ ಪುತ್ರನಾಗಿದ್ದ ಫಾಝಿಲ್ ಬಡತನದಲ್ಲಿ ಬೆಳೆದರೂ ಸ್ವಾಭಿಮಾನಿಯಾಗಿದ್ದ. ಪದವೀಧರ, ಅವಿವಾಹಿತ. ಎಚ್ ಪಿಸಿ ಎಲ್ ಕಂಪನಿಯಲ್ಲಿ ಗ್ಯಾಸ್ ಲೋಡಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಂದಿಗೂ ಯಾರಿಗೂ ಕೇಡು ಬಗೆದವರಲ್ಲ, ಯಾವ ಪಕ್ಷ , ಸಂಘಟನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡವರಲ್ಲ. 2018 ರಲ್ಲಿ ಕಾಲೇಜು ದಿನಗಳಲ್ಲಿ ಸರ್ವ ಕಾಲೇಜು ಯೂನಿಯನ್ ನಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದು ಬಿಟ್ಟರೆ , ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕಿದ್ದ ವ್ಯಕ್ತಿ. ಯಾರೊಂದಿಗೂ ಶತ್ರುತ್ವವೂ ಇರಲಿಲ್ಲ, ಆದರೂ ಹಂತಕರೂ ಅವರನ್ನೇಕೆ ಗುರಿಯಾಗಿಸಿದರೂ ಎನ್ನುವುದು ಅವರ ಸಹವರ್ತಿಗಳೆಲ್ಲರ ಪ್ರಶ್ನೆ.
ನೆತ್ತರಿಗೆ ನೆತ್ತರೇ ಪರಿಹಾರವೇ ? ಎಲ್ಲೋ ನಡೆದ ಕೊಲೆಗೆ, ಇನ್ಯಾರದ್ದೋ ಪ್ರತಿಕಾರದ ಕೊಲೆಯಾದರೆ ಯಾರಿಗೆ ಯಾವ ಲಾಭ? ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ರಾಜಕಾರಣಿಗಳಿಗೆ , ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಅರ್ಥವಾಗುವುದೇ? ಎನ್ನುವುದು ಎಲ್ಲರ ಮನದೊಳಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.