ಉಡುಪಿ, ಜು 29 (DaijiworldNews/SM): ಆಗುಂಬೆ ಘಾಟಿಯ ಮೂಲಕ ಲಘು ವಾಹನ ಹಾಗೂ ಬಸ್ಸುಗಳ ಸಂಚಾರಕ್ಕೆ ಮಾತ್ರ ಅನುಮತಿ ಇದ್ದು, ಇದನ್ನು ಆಗಸ್ಟ್ 31ರವರೆಗೆ ಮುಂದುವರೆಸಲಾಗಿದೆ. ಅಲ್ಲಿಯ ತನಕ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಭಾರೀ ವಾಹನ ಸಂಚಾರವನ್ನು ಜು.30ರವರೆಗೆ ಸ್ಥಗಿತಗೊಳಿಸಿ ಲಘು ವಾಹನ ಸಂಚಾರಕ್ಕೆ ಮಾತ್ರ ಮಾಡಲಾಗಿತ್ತು. ಭಾರೀ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿತ್ತು.
ಪ್ರಸ್ತುತ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲು ಕೋರಿಕೆಗಳು ಬರುತ್ತಿರುವುದರಿಂದ ಹಾಗೂ ಈಗಾಗಲೇ ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಬಿದ್ದು ಹೋಗಿದ್ದ ಗಾರ್ಡ್ವಾಲ್ನ ಮರು ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದು, ಸದ್ಯ ತಾತ್ಕಾಲಿಕ ದುರಸ್ಥಿ ಕಾರ್ಯ ಮುಂದುವರಿದಿದೆ. ದುರಸ್ಥಿ ಸಂಪೂರ್ಣ ಮುಗಿಯಲು ಎರಡು ವಾರಗಳ ಕಾಲಾವಧಿ ಬೇಕಾಗಿದ್ದು, ಆಗುಂಬೆ ಘಾಟಿಯಲ್ಲಿ ಆಗಾಗ ಮಳೆ ಸುರಿಯುತ್ತಿರುವುದರಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, ಭಾರೀ ವಾಹನಗಳ ಸಂಚಾರವನ್ನು ಆ.31ರವರೆಗೆ ಸ್ಥಗಿತಗೊಳಿಸುವುದು ಸೂಕ್ತ ಎಂದು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ವರದಿ ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.