ಸುಳ್ಯ, ಜು 29 (DaijiworldNews/SM): ತಾಲೂಕಿನ ಬಂಟ್ವಾಳ, ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಸನ ಎಸ್ಪಿ ಹರಿರಾಂ ಶಂಕರ್ ಅವರು ಬಂಟ್ವಾಳದಲ್ಲಿ ಮೊಕ್ಕಾಂ ಹೂಡಿದ್ದು, ಚಿಕ್ಕಮಗಳೂರು ಅಡಿಷನಲ್ ಎಸ್ಪಿ ಸಹಿತ ಚಿಕ್ಕಮಗಳೂರು, ಕಾರಾವಾರ ಹಾಗೂ ಬೆಳ್ತಂಗಡಿಯಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಲಾಗಿದೆ.
ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ವ್ಯಾಪಾರ ವಹಿವಾಟು ಬಂದ್ ಮಾಡಿ ಆದೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸಂಜೆ 6 ಗಂಟೆಯ ಸುಮಾರಿಗೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಸಿದರು. 29ರ ಮಧ್ಯರಾತ್ರಿಯಿಂದ ಆಗಸ್ಟ್ 6ರ ಮಧ್ಯರಾತ್ರಿವರೆಗೆ ಸೆ.144ರನ್ವಯ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬಂಟ್ವಾಳದ ಪೊಲೀಸರು ಬಿ.ಸಿ.ರೋಡ್ ನಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬಲು ಪಥಸಂಚಲನ ನಡೆಸಿದರು. ಈ ಸಂದರ್ಭ ಬಂಟ್ವಾಳ ಠಾಣೆ ಯ ಅಧಿಕಾರಿಗಳು, ಸಿಬ್ಬಂದಿಗಳುಹಾಗೂ ಕೆಎಸ್ ಆರ್ ಪಿ ಸಿಬ್ಬಂದಿಗಳು ಉಪಸ್ಥಿತರಿದ್ದರು.