ಮಂಗಳೂರು, ಜು 29 (DaijiworldNews/DB): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 29ರಿಂದ ಅನ್ವಯವಾಗುವಂತೆ ಆಗಸ್ಟ್ 1ರ ಬೆಳಗ್ಗೆ 8 ಗಂಟೆಯವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಬೆಳ್ಳಾರೆ ಹಾಗೂ ಸುರತ್ಕಲ್ನಲ್ಲಿ ಯುವಕರಿಬ್ಬರ ಹತ್ಯೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ದ ಸ್ಥಿತಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಜಿಲ್ಲೆಯಾದ್ಯಂತ ಆಗಸ್ಟ್ 1ರ ಬೆಳಗ್ಗೆ 8 ಗಂಟೆಯವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.
ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ/ದಾಸ್ತಾನು, ಸಾಗಾಣಿಕೆಯನ್ನು ಮಾಡುವಂತಿಲ್ಲ. ಬಾರ್, ವೈನ್ ಶಾಪ್ ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಮುಚ್ಚಬೇಕು. ಆದೇಶವನ್ನು ಅಬಕಾರಿ ಇಲಾಖೆಯ ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಅವರು ಸೂಚನೆ ನೀಡಿದ್ದಾರೆ.
ಈ ಹಿಂದೆ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಹಾಗೂ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಮದ್ಯದಂಗಡಿ ಬಂದ್ಗೆ ಆದೇಶ ನೀಡಲಾಗಿತ್ತು. ಆದರೆ ಇದೀಗ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದರಿಂದ ಜಿಲ್ಲೆಯಾದ್ಯಂತ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.