ಮಂಗಳೂರು, ಜು 29 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜು.29 ರ ಶನಿವಾರ ಬೆಳಗ್ಗೆ 11 ಗಂಟೆಗೆ ಎಲ್ಲಾ ಧರ್ಮದ ಮುಖಂಡರು, ಸಂಘಟನೆಯ ಪ್ರಮುಖರು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ , ಜಿಲ್ಲಾಡಳಿತದ ವತಿಯಿಂದ ಈ ಸಭೆ ಕರೆಯಲಾಗಿದ್ದು, ದ.ಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಧಾರ್ಮಿಕ ಮುಖಂಡರ ಸಲಹೆ ಸೂಚನೆ ಪಡೆದು , ಜಿಲ್ಲಾಡಳಿತ ಕಾನೂನು ಕ್ರಮ ಹಾಗೂ ಕಾನೂನು ಕಟ್ಟೆಚ್ಚರದ ಬಗ್ಗೆ ಅವರಿಗೆ ಈ ವೇಳೆ ಮನವರಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮೂವರ ಹತ್ಯೆ ನಡೆದಿದ್ದು, ಮಸೂದ್ ಕೊಲೆ, ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ , ಸುರತ್ಕಲ್ ನಲ್ಲಿ ಫಾಝಿಲ್ ಕೊಲೆ ಪ್ರಕರಣದಿಂದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಸಭೆ ಕರೆಯಲಾಗಿದೆ.