ಮಂಗಳೂರು, ಜು 29 (DaijiworldNews/DB): ಚೇತನಾಸ್ ಬ್ಯೂಟಿ ಲಾಂಜ್ನ ಅಂಗಸಂಸ್ಥೆ ಚೇತನಾಸ್ ಎಜ್ಯುಕೇಶನ್ ಫೌಂಡೇಶನ್ನ ಪದವಿ ಪ್ರದಾನ ಸಮಾರಂಭ ಜುಲೈ 28ರ ಗುರುವಾರ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ನಲ್ಲಿ ನಡೆಯಿತು.
ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಎನ್. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿಮಗೆ ಇನ್ನೊಬ್ಬರ ಸೌಂದರ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಘಟಿಕೋತ್ಸವ ಪ್ರಮಾಣಪತ್ರವು ಕೇವಲ ಶೇ. 5-10ರಷ್ಟು ಮಾತ್ರ. ಉಳಿದ ಶೇ. 90ನ್ನು ಪ್ರೀತಿ, ತಾಳ್ಮೆಮ ವಿನಯದಿಂದ ಕಲಿಯಬೇಕು. ನಿಮ್ಮ ಕೆಲಸಕ್ಕೆ ನೀವು ಬ್ರಾಂಡ್ ಸೃಷ್ಟಿಸಿಕೊಳ್ಳಬೇಕು ಮತ್ತು ಅದನ್ನು ಜನ ಒಪ್ಪಿಕೊಳ್ಳುವಂತಿರಬೇಕು ಎಂದರು.
ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಬೆಳ್ತಂಗಡಿ ಸುದ್ದಿ ನ್ಯೂಸ್ ಸಿಇಒ ಹಾಗೂ ಪಾಲುದಾರರಾದ ಸಿಂಚನಾ ಊರುಬೈಲು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಿಂದ ನೀಡುವ ಪ್ರತಿಕ್ರಿಯೆಯೇ ಚೇತನಾ ಸಂಸ್ಥೆಗೆ ಬಹುದೊಡ್ಡ ಪ್ರಶಸ್ತಿ. ಸಂಸ್ಥೆ ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಲಿ ಎಂದು ಆಶಿಸಿದರು.
40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಬ್ಯೂಟಿ ಪ್ಲಾನೆಟ್ ಮಾಲಕ ಜಗದೀಶ್ ಮಾತನಾಡಿ, ಚೇತನಾ ಅವರನ್ನು ಕಳೆದ ಮೂರು ದಶಕಗಳಿಂದಲೂ ಬಲ್ಲೆ. ಪ್ರಸ್ತುತ ಅವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸಂಸ್ಥೆಯಲ್ಲಿ ಕಲಿತವರು ಉತ್ತಮ ಸೌಂದರ್ಯ ತಜ್ಞರಾಗಿ ರೂಪು ತಳೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚೇತನಾಸ್ ಎಜ್ಯುಕೇಶನ್ ಫೌಂಡೇಶನ್ ಸ್ಥಾಪಕಿ ಚೇತನಾ ಎಸ್. ಮಾತನಾಡಿ, ಕಳೆದೆರಡು ತಿಂಗಳಿನಿಂದ ಸೌಂದರ್ಯ ಸಂಬಂಧಿಸಿದ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ನಾವು ಮುಂದುವರಿಯಬೇಕಾದರೆ ಮೊದಲು ನಮ್ಮ ಚಿಂತನಾ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಕಳೆದ ಎರಡೂವರೆ ದಶಕಗಳಿಂದ ನಾನು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವೃತ್ತಿಯಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದು, ಜನ ಈ ವೃತ್ತಿ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿರುವುದನ್ನೂ ಗಮನಿಸಿದ್ದೇನೆ. ಆದರೆ ಇಂತಹ ಮನಸ್ಥಿತಿ ಬದಲಾಗಬೇಕಿದೆ ಎಂದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿಲ್ಪಾ ಕಾಮತ್ ಮಾತನಾಡಿ, ಚೇತನಾ ಅವರ ಕೆಲಸದಿಂದ ನಾನು ಸ್ಪೂರ್ತಿ ಪಡೆದುಕೊಂಡಿದ್ದೇನೆ. ಅವರು ಕೇವಲ ಸೌಂದರ್ಯದ ಬಗೆಗೆ ಮಾತ್ರವಲ್ಲ, ಜೀವನ, ವೃತ್ತಿ ಬಗೆಗೂ ಮಾತನಾಡಿ ನಮ್ಮಲ್ಲಿ ಹುರುಪು ತುಂಬುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸ್ಮೆಟಾಲಾಜಿಸ್ಟ್ ಮತ್ತು ಮೇಕಪ್ ಕಲಾವಿದೆ ಹರ್ಮೀತ್ ಕೌರ್ ಆನಂದ್ ಮಾತನಾಡಿ, ನಮಗೆ ನಾವೇ ಮೌಲ್ಯ ನೀಡಬೇಕು. ನಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೂ ಹಂಚಿಕೊಂಡಾಗ ನಾವೂ, ನಮ್ಮೊಂದಿಗೆ ಇತರರೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಬ್ಯೂಟೀಶಿಯನ್ ಕ್ಷೇತ್ರದಲ್ಲಿ ಚೇತನಾಸ್ ಎಜ್ಯುಕೇಶನ್ ಫೌಂಡೇಶನ್ ಒಂದು ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಇದೇ ವೇಳೆ ಸಾಮಾಜಿಕ ಬದ್ದತೆಯನ್ನೂ ಮೆರೆಯುತ್ತಿದೆ. ಇಂಚರಾ ಫೌಂಡೇಶನ್ ಎನ್ಜಿಒ ಸಂಸ್ಥೆಯ ಫಲಾನುಭವಿ ಭಾವನಾ ಎಂಬ ಬಾಲಕಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಂಡಿದೆ.
ಚೇತನಾಸ್ ಸಂಸ್ಥೆಯಲ್ಲಿ ಶಾರದಾ ಜೆಲ್ಲಿ ಕಾಸ್ಮೆಟಾಲಜಿ ತರಬೇತಿ, ಮೈಕ್ರೋ ಬ್ಲೇಡಿಂಗ್, ಪರ್ಮನೆಂಟ್ ಮೇಕಪ್, ನೈಲ್ ಆರ್ಟ್, ಐಲ್ಯಾಶ್ ಎಕ್ಸ್ಟೆನ್ಷನ್, ಬೇಸಿಕ್ನಿಂದ ಅಡ್ವಾನ್ಸ್ಡ್ ಮೇಕಪ್ ಕೋರ್ಸ್, ಬೇಸಿಕ್ನಿಂದ ಅಡ್ವಾನ್ಸ್ಡ್ ಮದುಮಗಳ ಮೇಕಪ್ ಕೋರ್ಸ್, ಹೇರ್ ಸ್ಟೈಲ್ ಕೋರ್ಸ್, ಫ್ಲವರ್ ಮೇಕಿಂಗ್ ಸೇರಿದಂತೆ ಎರಡು ತಿಂಗಳ ಅವಧಿಯಲ್ಲಿ ವಿವಿಧ ತರಬೇತಿಗಳನ್ನು ನೀಡಲಾಯಿತು. ಪೂಜಾ ರಾವ್ ಸ್ವಾಗತಿಸಿ ವಂದಿಸಿದರು.