ಮಂಗಳೂರು, ಜು 29 (DaijiworldNews/DB): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಕಡಬ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ವಿಧಿಸಲಾಗಿದ್ದ ನಿಷೇದಾಜ್ಞೆಯನ್ನು ಆಗಸ್ಟ್ 6ರವರೆಗೆ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಆದೇಶಿಸಿದ್ದಾರೆ.
ಜುಲೈ 29ರ ರಾತ್ರಿ 12ರಿಂದ ಆಗಸ್ಟ್ 6ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ. ಗುಂಪು ಗೂಡುವುದು, ಸಭೆ, ಮೆರವಣಿಗೆ, ಸಮಾರಂಭಗಳನ್ನು ನಡೆಸುವುದು, ದೈಹಿಕ ಹಿಂಸೆಯನ್ನುಂಟು ಮಾಡುವ ವಸ್ತುಗಳನ್ನು ಒಯ್ಯುವುದು, ಪ್ರತಿಕೃತಿ ಪ್ರದರ್ಶನ, ಸಾರ್ವಜನಿಕ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವಂತಹ ಕೂಗು ಉಚ್ಚರಿಸುವುದು ಸೇರಿದಂತೆ ಯಾವುದೇ ಅಪರಾಧ ಎಸಗುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ಸೂಚಿಸಿದ್ದಾರೆ.
ಮದ್ಯದಂಗಡಿ ಬಂದ್
ದುಷ್ಕರ್ಮಿಗಳಿಂದ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನ ಎಲ್ಲಾ ಮದ್ಯದ ಅಂಗಡಿಗಳನ್ನು ಜುಲೈ 29ರಿಂದ ಆಗಸ್ಟ್1ರ ಬೆಳಗ್ಗೆ 8 ಗಂಟೆಯವರೆಗೆ ಮುಚ್ಚಲು ದ.ಕ. ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಆದೇಶಿಸಿದ್ದಾರೆ.
ಇದಲ್ಲದೆ, ಸುರತ್ಕಲ್ನಲ್ಲಿ ದುಷ್ಕರ್ಮಿಗಳಿಂದ ಫಾಝಿಲ್ ಎಂಬ ಯುವಕನ ಹತ್ಯೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಜುಲೈ 29ರ ಬೆಳಗ್ಗೆ10 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಮುಚ್ಚಲು ನಿರ್ದೇಶನ ನೀಡಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಬೆಳ್ಳಾರೆ ಸಹಿತ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ, ಸುರತ್ಕಲ್, ಬಜ್ಪೆ, ಪಣಂಬೂರು, ಮೂಲ್ಕಿ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಮದ್ಯಪಾನ ಮಾಡುವ ಮೂಲಕ ಸಾರ್ವಜನಿಕ ಶಾಂತಿ ಭಂಗ ಮತ್ತು ಕಾನೂನು ಸುವ್ಯವಸ್ಥೆಗೆ ತೊಡಕುಂಟಾಗುವ ಸಾಧ್ಯತೆಯನ್ನು ಮನಗಂಡು ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ/ದಾಸ್ತಾನು, ಸಾಗಾಣಿಕೆಯನ್ನು ಮಾಡುವಂತಿಲ್ಲ ಎಂದು ಅವರು ಸೂಚಿಸಿದ್ದಾರೆ. ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಮುಚ್ಚಬೇಕು. ನಿಷೇದಾಜ್ಞೆ ಸಮಯದಲ್ಲಿ ಬಾರ್/ವೈನ್ ಶಾಪ್ಗಳ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಸೀಲುಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದು ಅಬಕಾರಿ ಉಪ ಆಯಕ್ತರಿಗೆ ಇದೇ ವೇಳೆ ಅವರು ಸೂಚನೆ ನೀಡಿದ್ದಾರೆ.