ಮಂಗಳೂರು, ಜು 29 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆ 6 ಗಂಟೆಯಿಂದ ಸೋಮವಾರ ಆಗಸ್ಟ್ 1ರ ಮುಂಜಾನೆ 6 ರವರೆಗೆ ಅಂಗಡಿ-ಮುಂಗಟ್ಟು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಆದೇಶ ಆ. 1ರ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿ-ಮುಂಗಟ್ಟು ಮುಚ್ಚುವಂತೆ ಸೂಚಿಸಲಾಗಿದೆ.
ಜನರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಆದರೆ, ತುರ್ತು ಸೇವೆಗಳು, ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಚಿತ್ರಮಂದಿರ, ಸಿನೆಮಾ ಹಾಲ್, ಪಬ್ಗಳು ಕಾರ್ಯನಿರ್ವಹಿಸುವಂತಿಲ್ಲ. ಉರ್ತು ಮತ್ತು ಅವಶ್ಯಕ ಕಾರ್ಯಗಳ ಹೊರತುಪಡಿಸಿ ಇನ್ಯಾವುದೇ ಕಾರಣಗಳಿಂದ ಸಾರ್ವಜನಿಕರು ವಸತಿ ಸಮುಚ್ಚಯಗಳಿಂದ ಹೊರ ಬರುವಂತಿಲ್ಲ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅವಶ್ಯವೆಂದು ಕಂಡು ಬಂದಲ್ಲಿ ಮಾತ್ರ ಟ್ಯಾಕ್ಸಿ, ಬಸ್, ಅಟೋರಿಕ್ಷಾ ವಾಹನಗಳ ಸಂಚಾರಕ್ಕೆ ಅವಕಾಶವಿರುತ್ತದೆ. ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಮಾತ್ರ ವಾಹನ ಬಳಸಲು ಅವಕಾಶವಿರುತ್ತದೆ. ಅನಗತ್ಯ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಜೆಲ್ಲೆಯಲ್ಲಿ ಎಲ್ಲಾ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಉತ್ಸವ, ಜಾತ್ರೆ ಮುಂದೂಡಬೇಕು. ಈಗಾಗಲೇ ನಿಗದಿಪಡಿಸಿದ ಖಾಸಗಿ ಕಾರ್ಯಕ್ರಮಗಳನ್ನೂ ಮುಂದೂಡಬೇಕು. ಹೊಟೇಲ್, ಪಾರ್ಸೆಲ್ ವ್ಯವಸ್ಥೆ, ತುರ್ತು ವ್ಯವಸ್ಥೆಗಳಿಗೆ ಮಾತ್ರ ಅವಕಾಶವಿರುತ್ತದೆ. ಜಿಲ್ಲೆಯ ಎಲ್ಲಾ ಸಂಧ್ಯಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಇನ್ನು ಬೆಳಗ್ಗೆನಿಂದ ಸಂಜೆ 6 ಗಂಟೆಯೊಳಗೆ ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಆದೇಶವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.