ಬೆಳ್ಳಾರೆ, ಜು 29 (DaijiworldNews/HR): ಬೆಳ್ಳಾರೆಯಲ್ಲಿ ಗಾಡಿ ಪಂಕ್ಚರ್ ಅಲ್ಲಾ ರಾಜ್ಯಾಧ್ಯಕ್ಷರ ತಲೆ ಹೊಡೆಯಬೇಕಿತ್ತು. ನಾವು ಬಿಜೆಪಿಯವರೊಟ್ಟಿಗೆ ಇದ್ದರೆ ನಾವು ಹೆಣವಾಗುತ್ತಿದ್ದೇವು ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ವಾಗ್ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ರಾಷ್ಟ್ರ ನಿರ್ಮಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹಿಂದೂಗಳನ್ನೇ ಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪ್ರವೀಣ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲು ಹಿಂದೂ ಸಮಾಜ ಆಗ್ರಹಿಸಿದ್ದರೆ, ಈಗ ಸರಕಾರ 25 ಮತ್ತು ಬಿಜೆಪಿ 50 ಲಕ್ಷ ನೀಡಿ ಕೈತೊಳೆದುಕೊಂಡಿದೆ. 40 ಶೇಕಡಾ ಕಮಿಷನ್ ಹೊಡೆಯುವ ಬಿಜೆಪಿಗರು ಇದರಲ್ಲಿ 50 ಶೇಕಡಾ ಕಮಿಷನ್ ಹೊಡೆದಿರಬೇಕು ಎಂದು ಆರೋಪಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಅವರನ್ನು ದ.ಕ ಗಡಿಯಿಂದಲೇ ಹಿಂದಕ್ಕೆ ಕಳಿಸಿದ್ದಾರೆ. ಅಂತಹ ತಪ್ಪು ಮುತಾಲಿಕ್ ಏನು ಮಾಡಿದ್ದಾರೆ? ಅವರೇನು ಭಯೋತ್ಪಾದಕರೇ? ಬೆಳ್ಳಾರೆ, ಮಂಗಳೂರು, ಬೆಂಗಳೂರು ಎಂದೆಲ್ಲ ಎಲ್ಲೆಲ್ಲೂ ಭಯೋತ್ಪಾದಕರ ತಿರುಗಾಟಕ್ಕೆ ಅವಕಾಶ ನೀಡಿರುವ ಬಿಜೆಪಿ ಸರಕಾರ ಈಗ ಹಿಂದೂ ನಾಯಕನನ್ನು ನಿರ್ಬಂಧಿಸುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.