ಮಂಗಳೂರು, ಜು 29(DaijiworldNews/MS): ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್ , ಬಜ್ಪೆ, ಮೂಲ್ಕಿ ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾಝಿಲ್ ಕೊಲೆ ಪ್ರಕರಣದ ಸಂಬಂಧ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ, ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ನಗರದ ಎಲ್ಲಾ ಮುಸ್ಲಿಮರು ತಮ್ಮ ಶುಕ್ರವಾರದ ಪ್ರಾರ್ಥನೆಯನ್ನು ಮನೆಯಲ್ಲಿಯೇ ನಡೆಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮನವಿ ಮಾಡಿದ್ದಾರೆ.
ಸುರತ್ಕಲ್ ಸಮೀಪದ ಮಂಗಲಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್ ನನ್ನು ದುಷ್ಕರ್ಮಿಗಳ ತಂಡ ಹತ್ಯೆ ಮಾಡಿದ ಘಟನೆ ಸಂಬಂಧ ಯಾವುದೇ ಅಹಿತಕರ ಘಟನೆ ನಡೆಯದಂತೆ , ಈಗಾಗಲೇ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶನಿವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮದ್ಯ ಮಾರಾಟ ನಿಷೇಧಿಸಲಾಗಿದೆ . ಅಲ್ಲದೇ ಮುಸ್ಲಿಮರು ತಮ್ಮ ಶುಕ್ರವಾರದ ಪ್ರಾರ್ಥನೆ ತಮ್ಮ ಸನಿಹದ ಮಸೀದಿಯಲ್ಲಿ ಜಾಸ್ತಿ ಜನ ಸೇರದಂತೆ, ಅಥವಾ ತಮ್ಮ ಮನೆಯಲ್ಲಿಯೇ ನೆರೆವೇರಿಸುವಂತೆ ಮನವಿ ಮಾಡಿದ್ದಾರೆ.
ಜು.೨೮ ರ ೮.೩೦ ರ ವೇಳೆಗೆ ಸುರತ್ಕಲ್ ಸಮೀಪದ ತಾತ್ಕಾಲಿಕ ಮಾರುಕಟ್ಟೆ ಬಳಿ ನಾಲ್ವರ ತಂಡ ಮಂಗಲಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್ ಮೇಲೆ ಕಾರಿನಲ್ಲಿ ಬಂದ ತಂಡ ತಲವಾರಿನಿಂದ ದಾಳಿ ಮಾಡಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಫಾಝಿಲ್ ರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.