ಕಾರ್ಕಳ, ಜ27(SS): ಸ್ನೇಹಕೂಟಕ್ಕೆ ಬಂದಿದ್ದ ತಂಡದ ಸದಸ್ಯರೊಬ್ಬರು ನೀರಿಗೆ ಬಿದ್ದು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕಾರ್ಕಳದ ಮಾಳ ಕಜೆ ಫಾಲ್ಸ್ನಲ್ಲಿ ಸಂಭವಿಸಿದೆ.
ಪಣಂಬೂರಿನ ರಾಜೇಶ್ ಮೃತಪಟ್ಟವರು. ಶಾಲಾ ಸಹಪಾಠಿಗಳಾಗಿದ್ದ 11 ಮಂದಿ ಮಂಗಳೂರಿನಿಂದ ಕಾರ್ಕಳಕ್ಕೆ ಬಂದಿದ್ದು, ಅಲ್ಲಿಂದ ಬೆಳಿಗ್ಗೆ 11.15ರ ವೇಳೆಗೆ ಮಾಳ ಕಜೆ ಫಾಲ್ಸ್ಗೆ ತಲುಪಿದ್ದರು. ಸುಮಾರು ಮಧ್ಯಾಹ್ನ 1.15ರ ವೇಳೆಗೆ ಕಿರುಚಾಟ ಕೇಳಿದ್ದು, ಜೊತೆಯಲ್ಲಿ ಬಂದಿದ್ದ ಪಣಂಬೂರಿನ ರಾಜೇಶ್ ಫಾಲ್ಸ್ನ ತಳಭಾಗದ ನೀರಿನಲ್ಲಿ ಮುಳುಗುತ್ತಿರುವ ದೃಶ್ಯಾವಳಿ ಇವರಿಗೆ ಕಾಣಿಸಿಕೊಂಡಿತ್ತು. ಆ ಕೂಡಲೇ ಜೊತೆಯಲ್ಲಿ ಇದ್ದ ರವಿಶಂಕರ್ ಎಂಬವರು ನೀರಿಗೆ ಇಳಿದು ಹುಡುಕಾಡುವ ಪ್ರಯತ್ನ ನಡೆಸಿದ್ದರೂ ರಾಜೇಶ್ನ ಸುಳಿವು ಸಿಗಲಿಲ್ಲ.
ಬಳಿಕ ಕಾರ್ಕಳ ಅಗ್ನಿಶಾಮಕ ದಳಕ್ಕೆ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಸುಮಾರು 2 ಗಂಟೆಗಳ ಕಾಲ ಹುಡುಕಾಟದಲ್ಲಿ ತೊಡಗಿಸಿ ಮೃತದೇಹ ಮೇಲಕ್ಕೆತ್ತಿದ್ದಾರೆ.