ತಿರುವನಂತಪುರ, ಜ276(SS): ಹೆಲಿಕಾಪ್ಟರ್ ಮೂಲಕ ಕೇರಳ ಪ್ರವಾಹದಲ್ಲಿ ಅಪಾಯಕ್ಕೆ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿದ ಕಮಾಂಡರ್ ವಿಜಯ್ ವರ್ಮಾ ಭಾರತೀಯ ನೌಕಾ ಸೇನೆ ನೀಡುವ ಶೌರ್ಯ ಪ್ರಶಸ್ತಿ ನೌಕಾ ಸೇನಾ ಪದಕಕ್ಕೆ ಭಾಜನರಾಗಿದ್ದಾರೆ.
ಗರ್ಭಿಣಿಯನ್ನು ರಕ್ಷಿಸಿದ ರೋಚಕ ಕಾರ್ಯಚರಣೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ವಿಜಯ್ ವರ್ಮಾ ನೇತೃತ್ವದ ತಂಡ ಸಜಿತಾ ಸೇರಿದಂತೆ ಮತ್ತೊಬ್ಬಳು ಗರ್ಭಿಣಿ ಮತ್ತು 10 ಮಂದಿಯನ್ನು ಪ್ರವಾಹ ಸ್ಥಳದಿಂದ ರಕ್ಷಣೆ ಮಾಡಿದ್ದರು.
ಭಾರತೀಯ ನೌಕಾ ಪಡೆಯಲ್ಲಿ ಪೈಲಟ್ ಇನ್ ಕಮಾಂಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್ ವರ್ಮಾ ಅವರ ಸಾಹಸವನ್ನು ಗುರುತಿಸಿ ಐಎನ್ಎಸ್ ಗರುಡದ ಸ್ಟಾಫ್ ಕ್ಯೂ1 ಆಗಿ ಬಡ್ತಿ ಜತೆಗೆ ನೌ ಸೇನಾ ಪದಕವನ್ನು ನೀಡಿ ಗೌರವಿಸಲಾಗಿದೆ.
25 ವರ್ಷದ ಗರ್ಭಿಣಿ ಸಜಿತಾ ಜಬಿಲ್ ಅಲುವಾ ಸಮೀಪದ ಚೆಂಗಮಾಂಡ್ ಎಂಬಲ್ಲಿ ಪ್ರವಾಹದಿಂದ ಅಪಾಯದ ಅಂಚಿನಲ್ಲಿದ್ದರು. ಇವರನ್ನು ವಿಜಯ್ ವರ್ಮಾ ನೇತೃತ್ವದ ತಂಡ ರಕ್ಷಣೆ ಮಾಡಿತ್ತು. ಹೆಲಿಕಾಪ್ಟರ್ ಮೂಲಕ ಗರ್ಭಿಣಿಯನ್ನು ನೆಲದಿಂದ ಮೇಲೆತ್ತಿ ನೌಕಾ ಪಡೆಯ ವೈದ್ಯಕೀಯ ಕೇಂದ್ರಕ್ಕೆ ಸುರಕ್ಷಿತವಾಗಿ ಸಾಗಿಸಲಾಗಿತ್ತು. ವೈದ್ಯಕೀಯ ಕೇಂದ್ರ ತಲುಪಿದ ಗಂಟೆಯೊಳಗೆ ಸಜಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.