ಮಂಗಳೂರು, ಜು 28 (DaijiworldNews/DB): ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಈಗ ತೆರಳುತ್ತಿದ್ದೇನೆ. ಅಲ್ಲಿ ಅವರ ಮನೆಯವರ ಜೊತೆ ಮಾತನಾಡಿದ ಬಳಿಕ ಪರಿಹಾರ ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಲೆಂದು ಬುಧವಾರ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನವಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆ. ಪೊಲೀಸರಿಗೆ ಈ ವಿಚಾರದಲ್ಲಿ ಮುಕ್ತವಾದ ಕಲಸಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶೀಘ್ರ ಕೊಲೆಗಡುಕರನ್ನು ಹಿಡಿದು ಉಗ್ರ ಶಿಕ್ಷೆ ನೀಡಲಾಗುವುದು ಎಂದರು.
ಪ್ರಾಥಮಿಕ ಮಾಹಿತಿ ಪ್ರಕಾರ ಘಟನೆಗೆ ಕೇರಳದ ನಂಟಿರುವುದು ಗೊತ್ತಾಗಿದೆ. ಹೀಗಾಗಿ ಘಟನೆ ಆದ ದಿನದಿಂದಲೇ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಡಿಜಿಯವರ ಮುಖಾಂತರ ಕೇರಳ ಡಿಜಿಯವರನ್ನು ಮಾತನಾಡಿಸಿದ್ದೇನೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ದ.ಕ. ಎಸ್ಪಿಯವರು ಸಂಪರ್ಕದಲ್ಲಿದ್ದಾರೆ. ಅಲ್ಲಿನ ಪೊಲೀಸರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.
ಬಂಧಿತ ಆರೋಪಿಗಳಿಬ್ಬರು ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಗೊತ್ತಿಲ್ಲ. ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಎಲ್ಲವೂ ಹೊರಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.