ಸುಳ್ಯ, ಜು 28 (DaijiworldNews/DB): ಪೊಲೀಸರು ತನಿಖೆಗಾಗಿ ಮಗನನ್ನು ಕರೆದೊಯ್ದಿದ್ದು, 24 ಗಂಟೆ ಕಳೆದರೂ ಬಿಟ್ಟಿಲ್ಲ. ಅಲ್ಲದೆ, ಕೊಲೆ ಆರೋಪಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ಯಾವುದೇ ತಪ್ಪು ಮಾಡದವನ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಶಫೀಕ್ ಬೆಳ್ಳಾರೆಯ ಮನೆಯವರು ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶಫೀಕ್ ತಂದೆ ಇಬ್ರಾಹಿಂ, ಶಫೀಕ್ ಎಸ್ಡಿಪಿಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಆತ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿಲ್ಲ. ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಅದರಲ್ಲಿ ಭಾಗವಹಿಸಿ ಬಂದ ಆತನನ್ನು ರಾತ್ರಿ ವೇಳೆಗೆ ವಿಚಾರಣೆಗೆಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಘಟನೆ ನಡೆದ ದಿನದಂದು ಆತ ಆಚೆ ಹೋಗಿದ್ದಾನೆ ಎಂದು ಈಗ ಹೇಳುತ್ತಿದ್ದು, ಅವನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಆಚೆ ಅವನು ಮಸೀದಿಗೆ ಹೋಗುತ್ತಿದ್ದ ಹೊರತು ಬೇರೆ ವಿಚಾರದಲ್ಲಿ ಅವನು ಭಾಗಿಯಾಗಿಲ್ಲ ಎಂದರು.
ಇದೇ ವೇಳೆ ಶಫೀಕ್ ಪತ್ನಿ ಅನ್ಶಿಪಾ ಮಾತನಾಡಿ, ಪತಿ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಆದರೆ ಯಾವುದೇ ಗಲಾಟೆಗಳಲ್ಲಿ ಭಾಗಿಯಾಗಿಲ್ಲ, ಅಲ್ಲದೆ, ಗಲಾಟೆಗಳಲ್ಲಿ ಭಾಗಿಯಾಗದಂತೆ ಬೇರೆಯವರಿಗೂ ತಿಳಿ ಹೇಳುತ್ತಿದ್ದರು. ಆದರೆ ಈಗ ಮಾಡದ ತಪ್ಪಿಗೆ ಅವರ ಮೇಲೆ ಪ್ರಕರಣ ದಾಖಲಿಸಿ ಆರೋಪಿ ಪಟ್ಟ ಕಟ್ಟುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರವೀಣ್ ಹತ್ಯೆಯಾದ ದಿನ ಬೆಳಗ್ಗೆ ಸಿಕ್ಕಿದ್ದರು ಎಂಬುದಾಗಿ ವರೇ ಹೇಳಿದ್ದರು. ಆದರೆ ರಾತ್ರಿ ವೇಳೆಗೆ ಅವರು ಹತ್ಯೆಯಾಗಿರುವ ವಿಚಾರವನ್ನು ಮೊಬೈಲ್ನಲ್ಲಿ ನೋಡಿ ನೋವು ವ್ಯಕ್ತಪಡಿಸಿದ್ರು ಎಂದು ಪತ್ನಿ ಹೇಳಿದ್ದಾರೆ.