ಮಂಗಳೂರು, ಜು 28 (DaijiworldNews/DB): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಜುಲೈ 29ರ ಮಧ್ಯರಾತ್ರಿ 12 ಗಂಟೆಯವರೆಗೆ ಮುಚ್ಚಲು ದ.ಕ. ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಆದೇಶಿಸಿದ್ದಾರೆ.
ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಪ್ರವೀಣ್ ನೆಟ್ಟಾರ್ ಹತ್ಯೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಬೆಳ್ಳಾರೆ ಸಹಿತ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾ ಪ್ತಿಯಲ್ಲಿ ಪರಿಸ್ಥಿತಿ ಪ್ರಕ್ಷುಬ್ದವಾಗಿದ್ದು, ಇದು ಬೇರೆ ಸ್ಥಳಗಳಿಗೂ ಪ್ರಸರಿಸುವ ಸಾಧ್ಯತೆ ಇದೆ. ಹೀಗಾಗಿ ಮದ್ಯಪಾನ ಮಾಡುವ ಮೂಲಕ ಸಾರ್ವಜನಿಕ ಶಾಂತಿ ಭಂಗ ಮತ್ತು ಕಾನೂನು ಸುವ್ಯವಸ್ಥೆಗೆ ತೊಡಕುಂಟಾಗುವ ಸಾಧ್ಯತೆಯನ್ನು ಮನಗಂಡು ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜುಲೈ 27ರ ಮಧ್ಯರಾತ್ರಿ 12 ಗಂಟೆಯಿಂದಲೇ ಅನ್ವಯವಾಗುವಂತೆ ಜುಲೈ 29ರ ಮಧ್ಯರಾತ್ರಿ 12 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ/ದಾಸ್ತಾನು, ಸಾಗಾಣಿಕೆಯನ್ನು ಮಾಡುವಂತಿಲ್ಲ ಎಂದು ಅವರು ಸೂಚಿಸಿದ್ದಾರೆ.
ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಮುಚ್ಚಬೇಕು. ನಿಷೇದಾಜ್ಞೆ ಸಮಯದಲ್ಲಿ ಬಾರ್/ವೈನ್ ಶಾಪ್ಗಳ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಸೀಲುಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದು ಅಬಕಾರಿ ಉಪ ಆಯಕ್ತರಿಗೆ ಇದೇ ವೇಳೆ ಅವರು ಸೂಚನೆ ನೀಡಿದ್ದಾರೆ.