ಮಂಗಳೂರು, ಜು 27 (DaijiworldNews/MS): ತುಳುನಾಡಿನಲ್ಲಿ ಆಷಾಢ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಇಂದು ಕರಾವಳಿಗರು ಪ್ರಾತಃಕಾಲದಲ್ಲಿ ಎದ್ದು ಹಾಲೆ ಮರದ ಕಷಾಯ ತಯಾರಿಸಿ ಸೇವಿಸಿ , ಶಿವ ಕ್ಷೇತ್ರಗಳಲ್ಲಿ ತೀರ್ಥ ಸ್ನಾನ ಮಾಡುವ ಪ್ರತೀತಿ ಇದೆ.
ಆಟಿಯ ಅಮವಾಸ್ಯೆಯಂದು ಪಾಲೆ ಅಥವಾ ಹಾಲೆ ಮರದ ತೊಗಟೆಯಲ್ಲಿ ಸಂಗ್ರಹವಾಗಿರುವ ರಸವನ್ನು ಪ್ರಾತಃಕಾಲದಲ್ಲಿ ಕಲ್ಲಿನಿಂದ ಜಜ್ಜಿ ತೆಗೆದು ಮನೆಯಲ್ಲಿ ಕಷಾಯ ತಯಾರಿಸಿ ಸೇವಿಸುತ್ತಾರೆ. ಇದರ ಸೇವನೆಯಿಂದ ರೋಗಗಳಿಂದ ರಕ್ಷಣೆ ಒದಗಿಸಿತ್ತದೆ ವರುಷ ಪೂರ್ತಿ ಸ್ವಸ್ಥವಾಗಿರುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ.
ಇನ್ನು ಆಟಿ ಅಮಾವಾಸ್ಯೆ ಪ್ರಯುಕ್ತ ಕರಾವಳಿಯ ನಾನಾ ಶಿವ ಕ್ಷೇತ್ರಗಳಲ್ಲಿ ಗುರುವಾರ ತೀರ್ಥ ಸ್ನಾನ ಸಂಭ್ರಮ- ಸಡಗರ. ಐತಿಹಾಸಿಕ ಹಿನ್ನೆಲೆಯ ಮಹತೋಭಾರ ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ತೀರ್ಥಸ್ನಾನ ವಿಶೇಷ ಸ್ಥಾನ ಪಡೆದಿದ್ದು, ಗುರುವಾರ ಮುಂಜಾನೆಯಿಂದಲೇ ಇಲ್ಲಿಗೆ ಊರ- ಪರವೂರ ಅಸಂಖ್ಯಾತ ಭಕ್ತಾದಿಗಳು ಬಂದು ತೀರ್ಥಸ್ನಾನ ಮಾಡುತ್ತಾರೆ.