Karavali
ಮಂಗಳೂರು: ಪಕ್ಷ, ನಿರ್ಧಾರ ಸಮರ್ಥಿಸಿ ಬೆಂಬಲಿಸಿದ ಕಾರ್ಯಕರ್ತರಿಗ್ಯಾಕೆ ಈ ಶಿಕ್ಷೆ-ಬೀದಿಯಲ್ಲಿ ನಡೆದೇಹೊಯ್ತು ಶವಯಾತ್ರೆ!
- Wed, Jul 27 2022 11:13:43 PM
-
Santhosh M
ಮಂಗಳೂರು, ಜು 27 (DaijiworldNews/SM): ಕರಾವಳಿ ಜಿಲ್ಲೆ ಬುದ್ದಿವಂತರ, ಸುಶಿಕ್ಷಿತರ ತವರೂರು. ಎಲ್ಲವನ್ನು ತೂಗಿ ಅಳೆದು ಸ್ವೀಕರಿಸುವವರು. ಹೃದಯ ಶ್ರೀಮಂತಿಕೆ ಗೌರವ, ಸ್ವಾಭಿಮಾನದ ಬದುಕನ್ನು ನಡೆಸುವ ವರ್ಗವನ್ನು ಒಳಗೊಂಡಿರುವ ಕಡಲ ನಗರಿ. ಆದರೆ, ಕೆಲವು ವಿಚಾರಗಳು ಮಾತ್ರ ಈ ತುಳುನಾಡಿನ ಜನ ಅರಗಿಸಿಕೊಳ್ಳಲಾರರು. ಶಾಂತಿ ಸುವ್ಯವಸ್ಥೆ ಉಳಿಸಿ ಬೆಳೆಸಬೇಕೆನ್ನುವ ಅನೇಕರ ಹೋರಾಟದ ಮಧ್ಯೆ, ಕೆಲವು ಕ್ರಿಮಿಗಳು, ಶಾಂತಿ ಭಂಗಕ್ಕೆ ಕೈ ಹಾಕುತ್ತಿದ್ದು, ಕರಾವಳಿಯನ್ನು ಕೆಂಡವಾಗಿಸುತ್ತಿದೆ. ಇದು ಇಂದು ನಿನ್ನೆಯ ವಿಚಾರಗಳಲ್ಲ. ಇತಿಹಾಸ ಕೆದಕಿದಷ್ಟು ಪುರಾವೆಗಳ ಮಹಾಪೂರವೆ ಲಭ್ಯವಾಗುತ್ತ ಹೋಗುತ್ತದೆ.
ಇದೇ ಸಾಲಿಗೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿರುವ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕೊಲೆಗಳು ಸೇರ್ಪಡೆಗೊಂಡಿವೆ. ಈ ಇಬ್ಬರು ಅಮಾಯಕರ ನೆತ್ತರು ಬೀದಿಯಲ್ಲಿ ಹರಿದಿದೆ. ಯಾರದೋ ದ್ವೇಷಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಬೆಳ್ಳಾರೆಯಲ್ಲಿ ಜುಲೈ ಎರಡನೇ ವಾರದಲ್ಲಿ ಮಸೂದ್ ಹತ್ಯೆ ನಡೆದಿತ್ತು. ಅದಾದ ಒಂದೇ ವಾರದಲ್ಲಿ ಅಮಾಯಕ ಪ್ರವೀಣ್ ನನ್ನು ಹತ್ಯೆ ಮಾಡಲಾಗಿದೆ. ಈ ಎರಡೂ ಕೊಲೆಗಳಿಗೂ ಬಲವಾದ ಕಾರಣಗಳಿಲ್ಲ. ಮಸೂದ್ ಕೊಲೆ ಕ್ಷುಲ್ಲಕ ಕಾರಣದಿಂದಾಗಿ ನಡೆದಿತ್ತು. ಕೇರಳದಿಂದ ಬೆಳ್ಳಾರೆಗೆ ಬಂದಿದ್ದ ಮಸೂದ್ ನನ್ನು ಬರ್ಬರ ಹತ್ಯೆ ನಡೆಸಲಾಗಿತ್ತು. ಇದಾದ ವಾರದೊಳಗೆ ಮತ್ತೋರ್ವ ಅಮಾಯಕ ಪ್ರವೀಣ್ ಬರ್ಬರ ಕೊಲೆಯಾಗಿದ್ದಾನೆ.
ರಾತ್ರೋರಾತ್ರಿ ನಡೆಯಿತು ಪ್ರವೀಣ್ ಕೊಲೆ:
ಪ್ರವೀಣ್ ಕೊಲೆ ಪ್ರಕರಣ ಮಂಗಳವಾರ ರಾತ್ರಿ ವೇಳೆ ನಡೆದಿದ್ದು, ದುಷ್ಕರ್ಮಿಗಳು ಕಳ್ಳದಾರಿಯಲ್ಲಿ ಬಂದು ಕೊಂದು ಹೋಗಿದ್ದಾರೆ. ಪ್ರವೀಣ್ ನೆಟ್ಟಾರು ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬಾಗಿಲು ಹಾಕಿ ಮನೆಗೆ ತೆರಳಲು ಸ್ಕೂಟರ್ನಲ್ಲಿ ಕುಳಿತ್ತಿದ್ದರು. ಈ ವೇಳೆ ಜತೆಗಿದ್ದ ವ್ಯಕ್ತಿ ರೈನ್ಕೋಟ್ ತರಲು ಅಂಗಡಿ ಒಳಗೆ ಹೋದ ವೇಳೆ ಜೋರಾಗಿ ಬೊಬ್ಬೆ ಕೇಳಿ ಹೊರಗೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ಸ್ಕೂಟರ್ ನಿಂದ ೫೦ ಮೀಟರ್ ದೂರದಲ್ಲಿ ಕವಚಿ ಬಿದ್ದಿದ್ದ. ಆಗ ಅಲ್ಲಿಂದ ಮೂವರು ಅಪರಿಚಿತರು ಕೈಯಲ್ಲಿ ಹತ್ಯಾರು ಹಿಡಿದು ಬೈಕ್ನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ಪ್ರವೀಣ್ ಜೊತೆಯಲ್ಲಿದ್ದ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾನೆ.
ಒಂದೇ ಪಟ್ಟಣದಲ್ಲಿ ವಾರದೊಳಗೆ ಎರಡನೇ ಬಾರಿ ಹರಿಯಿತು ನೆತ್ತರು:
ಸುಳ್ಯ ತಾಲೂಕಿನ ಬೆಳ್ಳಾರೆ ಮೊದಲ ಸೂಕ್ಶ್ಮ ಪ್ರದೇಶ. ಈ ಭಾಗದಲ್ಲಿ ವಾರದ ಹಿಂದೆಯಷ್ಟೇ ಮಸೂದ್ ನನ್ನು ಎಂಟು ಮಂದಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿದ್ದರು. ಮಸೂದ್ ಮೂಲತಃ ಕೇರಳದವನು. ಕಾರ್ಯಕ್ರಮ ಹಾಗೂ ಕೆಲಸದ ನಿಮಿತ್ತ ಬೆಳ್ಳಾರೆಗೆ ಬಂದಿದ್ದ. ಈ ವೇಳೆ ಮೈತಾಗಿತು ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಬಾಟಲಿಯಿಂದ ಹೊಡೆದು ಹತ್ಯೆ ನಡೆಸಿದ್ದಾರೆ. ಮಸೂದ್ ತನ್ನ ಕೆಲಸ ಕಾರ್ಯಗಳಿಗೆ ಬಂದು ದುಷ್ಟರ ಕೈಗೆ ಸಿಲುಕಿ ಕೊಲೆಯಾಗಿದ್ದಾನೆ.
ಇದಾದ ವಾರದೊಳಗೆ ಅಮಾಯಕನಾಗಿದ್ದ ಪ್ರವೀಣ್ ಹತ್ಯೆಯಾಗಿದೆ. ತನ್ನ ಕೆಲಸವಾಯ್ತು ತಾನಾಯ್ತು ಎಂದುಕೊಂಡಿದ್ದಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಅಮಾಯಕ ಎರಡು ಜೀವಗಳು ಬಲಿಯಾಗಿವೆ. ಯಾರದೋ ಸ್ವರ್ಥ, ದ್ವೇಷಕ್ಕೆ ಸಿಲುಕಿ ಕುಟುಂಬಗಳ ಕೊಂಡಿಗಳು ಕಳಚಿ ಬಿದ್ದಿವೆ. ಆಧಾರಸ್ತಂಭವೇ ಕುಸಿದಿದೆ.
ಎರಡು ತಿಂಗಳಲ್ಲಿ ಮೂರು ಕೊಲೆ !
ಬೆಳ್ಳಾರೆಯಲ್ಲಿ ಎರಡು ತಿಂಗಳಲ್ಲಿ ಮೂರು ಕೊಲೆ ಹಾಗೂ ವಾರದ ಹಂತದಲ್ಲಿ ಎರಡು ಕೊಲೆ ನಡೆದಂತಾಗಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಚರಣ್ರಾಜ್ ಎಂಬಾತನ ಹತ್ಯೆ ನಡೆದಿತ್ತು. ಕಳೆದ ಮಂಗಳವಾರ ಮಸೂದ್ ಎಂಬಾತ ಹಲ್ಲೆಯಿಂದ ಗಾಯಗೊಂಡು ಮೃತಪಟ್ಟಿದ್ದ. ಇದೀಗ ಈ ಮಂಗಳವಾರ ದುಷ್ಕರ್ಮಿಗಳ ದಾಳಿಗೆ ಪ್ರವೀಣ್ ನೆಟ್ಟಾರು ಬಲಿಯಾಗಿದ್ದಾರೆ. ಈ ಮೂಲಕ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ತಿಂಗಳಲ್ಲಿ ಮೂರು ಕೊಲೆ ಕೃತ್ಯಗಳು ನಡೆದಿದೆ.
ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ-ಯಾರಿಗೆ ಲಾಭ?
ಕರಾವಳಿ ಜಿಲ್ಲೆಯಲ್ಲಿ ಹಿಂದುತ್ವ ಆಳವಾಗಿ ಬೇರೂರಿದೆ. ಇದೇ ಸಂಘಟನೆಯನ್ನು ಧರ್ಮದ ಹೆಸರನ್ನು ಬಳಸಿಕೊಂಡು ಬಿಜೆಪಿ ತನ್ನ ದಾಳವನ್ನು ಉರುಳಿಸುತ್ತಿರುವುದು ನಾವು ಆರಂಭದಿಂದಲೂ ಗಮನಿಸುತ್ತಿದ್ದೇವೆ. ದ.ಕ. ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಹೆಸರನ್ನು ಬಳಸಿಕೊಂಡ ಕಾರಣದಿಂದಾಗಿ ೭ ಮಂದಿ ಬಿಜೆಪಿ ಶಾಸಕರು ಗೆಲುವು ದಾಖಲಿಸಿಕೊಂಡಿದ್ದಾರೆ. ಹಿಂದುತ್ವಕ್ಕೆ ಏನಾದರೂ ಒಳಿತಾಗಲಿದೆ ಎನ್ನುವುದು ಮತದಾರರ ಯೋಚನೆಯಾಗಿತ್ತು. ಆದರೆ, ಹಿಂದುತ್ವದ ಹೆಸರು ಬಳಸಿದವರ ರಾಜಕೀಯ ಚದುರಂಗದಾಟ ಇದೀಗ ಒಂದೊಂದಾಗಿಯೇ ಬಹೀರಂಗಗೊಳ್ಳುತ್ತಿದೆ.
ತಮ್ಮದೇ ಪಕ್ಷದ ಸಚಿವರಿಗೆ ಕಾರ್ಯಕರ್ತರು ಬೇಡವಾದರಾ?
ಬಿಜೆಪಿಯಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಪ್ರವೀಣ್ ನನ್ನು ಬರ್ಬರವಾಗಿ ಹತ್ಯೆ ನಡೆದ ಬೆನ್ನಲ್ಲೇ ಜನರ ಆಕ್ರೋಶದ ಕಟ್ಟೆಯೊಡೆದಿದೆ. ಪಕ್ಷದ ಸಚಿವರು, ಶಾಸಕರು ಹಾಗೂ ಮುಖಂಡರು ಸ್ಥಳಕ್ಕೆ ಆಗಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪಕ್ಷದ ಕಾರ್ಯಕರ್ತನ ಸಾವು ನಡೆದ ಸಂದರ್ಭವಾದರೂ ಕಡೇಯ ಪಕ್ಷ ನಾಯಕರು ಭೇಟಿ ಕೊಟ್ಟು ಸಾಂತ್ವಾನದ ನುಡಿಗಳನ್ನಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ತನಕ ಕ್ಷೇತ್ರದ ಶಾಸಕ ಹಾಗೂ ಸಚಿವ ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಯಾವೊಬ್ಬ ನಾಯಕನೂ ಸ್ಥಳಕ್ಕೆ ತೆರಳಿರಲಿಲ್ಲ. ಇದು ಬೆಳ್ಳಾರೆಯ ಪ್ರವೀಣ್ ಬಂದು-ಮಿತ್ರರ ತಾಳ್ಮೆ ಪರೀಕ್ಷೆಗೆ ಕಾರಣವಾಗಿತ್ತು. ತಮ್ಮದೇ ಪಕ್ಷದ ಕಾರ್ಯಕರ್ತರ ಕೊಲೆ ನಡೆದಾಗ ಸ್ಥಳಕ್ಕೆ ಭೇಟಿ ನೀಡದವರು ರಾಜ್ಯಕ್ಕೆ ಸಮಾಜಕ್ಕೆ ಯಾವ ನ್ಯಾಯ ನೀಡಲಿದ್ದಾರೆ ಎನ್ನುವ ಸತ್ಯ ಸಂಗತಿಯ ಅರಿವು ಬಂದಿತ್ತು. ಇದಕ್ಕಾಗಿಯೇ ಮಧ್ಯಾಹ್ನದ ಬಳಿಕ ಬಂದ ನಾಯಕರಿಗೆ ಕಾರ್ಯಕರ್ತರು ಮುತ್ತಿಗೆ ಘೇರಾವು ಹಾಕಿ ಹಿಂದಕ್ಕೆ ಕಳುಹಿಸಿದ್ದರು.
ಸ್ಥಳದಲ್ಲಿ ನಾಯಕರಿದ್ದರೂ ಕಾರ್ಯಕರ್ತರಿಗೆ ಮಾತ್ರ ಲಾಠಿ ರುಚಿ:
ಪ್ರವೀಣ್ ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದ ವೇಳೆ ಆಕ್ರೋಶಿತ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದರು. ತಮ್ಮ ನಾಯಕರು ಸ್ಥಳದಲ್ಲಿರುವಾಗಲೇ ತಮ್ಮ ಮೇಲೆ ಪೊಲೀಸರು ಲಾಠಿ ಬೀಸಿರುವುದು ನಾಯಕರ ಮೇಲೆ ಮತ್ತಷ್ಟು ಆಕ್ರೋಶ ಹೆಚ್ಚಳಕ್ಕೆ ಕಾರಣವಾಯಿತು. ನಾಯಕರಿದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಗೋಚರರಾದರು. ಗೋಕಳ್ಳಾ ಸಾಗಾಟದ ವೇಳೆ ರಕ್ಷಕರೆಣಿಸಿಕೊಂಡಿದ ಈ ಕಾರ್ಯಕರ್ತರಿಗೆ ಆತ್ಮರಕ್ಷರೇ ಇಲ್ಲವಾದರು.
ಬೆಂಬಲಿಸಿದ ಕಾರ್ಯಕರ್ತರಿಗೆ ಸರಕಾರದಿಂದ ಶವಯಾತ್ರೆ:
ಬಿಜೆಪಿ ಪಕ್ಷಕ್ಕಾಗಿ ಜೀವವನ್ನೇ ನೀಡುವೆವು ಎನ್ನುವುದು ನಿಷ್ಠಾವಂತ ಕಾರ್ಯಕರ್ತರ ಮಾತು. ತಮ್ಮ ಸರಕಾರ ಯಾವುದೇ ನಿರ್ಧಾರಕ್ಕೆ ಬಂದರೂ ಅದು ಸರಿಯೇ ಎಂದು ಸಮರ್ಥಿಸಿಕೊಳ್ಳುವ ಕಾರ್ಯಕರರ್ತರು ಬಿಜೆಪಿಯಲ್ಲಿರುವವರು. ಬೆಲೆ ಏರಿಕೆ, ನೋಟ್ ಬ್ಯಾನ್, ಜಿಎಸ್ ಟಿ ಎಲ್ಲದಕ್ಕೂ ಸರಕಾರಗಳ ಪರವಾಗಿ ಬಿಜೆಪಿ ಕಾರ್ಯಕರ್ತರು ಬ್ಯಾಟ್ ಬೀಸಿದ್ದರು. ಇಷ್ಟು ಮಾತ್ರವಲ್ಲದೆ, ಪೆಟ್ರೋಲ್ ದರ ನೂರಲ್ಲ ಸಾವಿರದ ಗಡಿದಾಟಿದರೂ ನಾವು ಪೆಟ್ರೋಲ್ ಹಾಕಿಸಿಕೊಳ್ಳುತ್ತೇವೆ. ನಮ್ಮ ಪಕ್ಷ ದೇಶಕ್ಕಾಗಿ ಇವೆಲ್ಲವನ್ನು ಮಾಡುತ್ತಿದೆ ಎಂದು ಕಾರ್ಯಕರ್ತರು ಬಿಜೆಪಿಯ ಬಗ್ಗೆ ಹೆಮ್ಮೆಪಡುತ್ತಿದ್ದರು. ನಾಯಕರ ಹೇಳಿಕೆಗಳನ್ನು ಒಪ್ಪಿಕೊಂಡು ಸಮರ್ಥಿಸುತ್ತಿದ್ದರು. ಎಲ್ಲೋ ಒಂದು ಕಡೆ ಪಕ್ಷದ ಮೇಲೆ ಅಂಧಾಭಿಮಾನವೂ ಇತ್ತು ಎಂದರೆ ತಪ್ಪಿಲ್ಲ. ಅಷ್ಟೇಲ್ಲ ಪಕ್ಷದ ಮೇಲೆ ಭರವಸೆ ನಿರೀಕ್ಷೆ ಇಟ್ಟಿದ್ದ ಕಾರ್ಯಕರ್ತರಿಗೆ ಮಾತ್ರ ಪಕ್ಷದ ನಮ್ಮ ಭಾಗದ ನಾಯಕರು ಯಾವ ರೀತಿ ನಡೆಸಿಕೊಂಡರು ಎನ್ನುವುದಕ್ಕೆ ಇಂದಿನ ಘಟನೆಯೇ ಸಾಕ್ಷಿ ನುಡಿದಿದೆ. ತಾವು ಇಟ್ಟುಕೊಂಡಿದ್ದ ನಂಬಿಕೆ ಎಲ್ಲವೂ ಸುಳ್ಳಾಗಿದೆ. ಬೆಂಬಲಿಸಿದ ಕಾರ್ಯಕರ್ತನನ್ನು ನಡು ಬೀದಿಯಲ್ಲಿ ಶವಯಾತ್ರೆ ನಡೆಸಿ ಬಿಟ್ಟಿದ್ದಾರೆ ಇಲ್ಲಿನ ಕೆಲವು ಕಾಣನ ಕ್ರಿಮಿಗಳು.ಪಕ್ಷ, ಧರ್ಮ ಮೀರಿದ ಮಾನವ ಧರ್ಮ ಮರೆಯಾಯಿತೇ?
ಕರಾವಳಿ ಮೊದಲೇ ಹೇಳಿ ಕೇಳಿ ಸೂಕ್ಷ್ಮ ಪ್ರದೇಶ. ಕೊಲೆ ಪ್ರಕರಣಗಳು ಇಲ್ಲಿ ಮಾಮೂಲಿ ಎಂಬಂತೆ ನಡೆಯುತ್ತಿವೆ. ಕೊಲೆ ನಡೆದಾಗ ಆಕ್ರೋಶ ಆಕ್ರಂದನ ಇತ್ಯಾದಿಗಳು ನಡೆದರೆ, ಕೆಲವೇ ದಿನಗಳಲ್ಲಿ ಜನರು ಘಟನೆಗಳನ್ನು ಮರೆತು ಬಿಡುತ್ತಾರೆ. ಆದರೆ, ಆ ಕುಟುಂಬಗಳು ಉನ್ನುವ ನೋವಿಗೆ ಅಂತ್ಯವಿರುವುದಿಲ್ಲ. ಕಣ್ಣೀರ ಕಡಲಲ್ಲಿ ಕುಟುಂಬಗಳು ಮುಳುಗುತ್ತವೆ. ಕೇವಲ ಅಧಿಕಾರ, ಪಕ್ಷ, ಧರ್ಮದ ಹೆಸರಿನಲ್ಲೇ ಈ ರೀತಿಯ ಕೊಲೆ ಕೃತ್ಯಗಳು ನಡೆಯುತ್ತಿವೆ. ಹೆಚ್ಚಿನ ಕೊಲೆಗಳು ಕೋಮು ವಿಚಾರಕ್ಕೆ ಸಂಬಂಧಿಸಿ ಕರಾವಳಿಯ ಬುದ್ಧಿವಂತರ ಜಿಲ್ಲೆ ನಡೆಯುತ್ತಿರುವುದು ವಿಪರ್ಯಾಸ.
ಧರ್ಮವನ್ನೇ ಎತ್ತಿಕಟ್ಟಿ ಸಮಾಜವನ್ನು ಒಡೆಯುವ ದುಷ್ಟಶಕ್ತಿಯೊಂದು ಕೈಯಾಡಿಸುತ್ತಿದ್ದು, ಮುಗ್ದ ಜನರನ್ನು ಬಲಿಪಡೆಯುತ್ತಿವೆ. ದೂರದಲ್ಲಿ ನಿಂತು ಸಮಯದ ಲಾಭ ಪಡೆಯುತ್ತಿವೆ. ಅಮಾಯಕ ಜೀವದೊಂದಿಗೆ ಚೆಲ್ಲಾಟವಾಡಿ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿವೆ. ಇಂತಹ ಸಮಾಜ ದ್ರೋಹಿ ಶಕ್ತಿಗಳನ್ನು ಸರಕಾರ, ಪೊಲೀಸ್ ಇಲಾಖೆ ಮಟ್ಟಹಾಕಬೇಕು.
ಹೇಳಿಕೆಗಳಿಗೆ ಬ್ರೇಕ್ ಹಾಕಿ-ಶಾಂತಿ ಸೌಹಾರ್ದದ ಬೇಲಿ ಹಾಕಿ:
ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಕಟೀಲ್ ಈ ಹಿಂದೆ ನೀಡಿರುವ ಕೆಲವು ಹೇಳಿಕೆಗಳು ಕಾರ್ಯಕರ್ತರನ್ನು ಹುರಿದುಂಬಿಸಿತ್ತು. ಆನೆ ನಡೆದದ್ದೇ ದಾರಿ ಎನ್ನುವ ತನಕವೂ ತಲುಪಿತ್ತು. ಆದರೆ, ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೇ ಎನ್ನುವುದು ಇಂದು ಸತ್ಯವಾಗಿದೆ. ಅಂದು ಹೇಳಿಕೆ ನೀಡಿದ ವೇಳೆ ಚಪ್ಪಾಲೆ ಹೊಡೆದಿದ್ದ ಜನ, ಇಂದು ಅದೇ ಕಾರ್ಯಕರ್ತರ ಮುಂದೆ ಚಪ್ಪೆಯಾಗಿ ಕುಳಿತುಕೊಳ್ಳಬೇಕಾಯಿತು.
ಜನ ನಾಯಕರು ಶಾಂತಿ ಸೌಹಾರ್ದತೆಗೆ ಸಾಕ್ಷಿಯಾಗಬೇಕು. ಅನ್ಯಾಯವನ್ನು ಖಂಡಿಸಿ ನ್ಯಾಯವನ್ನು ನೀಡಬೇಕು. ಮಾನವ ಧರ್ಮಕ್ಕೆ ಮನುಷ್ಯಧರ್ಮಕ್ಕೆ ಬೆಲೆ ನೀಡಬೇಕು. ಕೊಲೆಗಟುಕರಿಗೆ ಕಠಿನಾತಿ ಕಠಿಣ ಶಿಕ್ಷೆಯನ್ನು ನೀಡಬೇಕು. ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಈ ನಾಯಕರು ಮುಂದಾಗಬೇಕು.