ಬೆಂಗಳೂರು, ಜ27(SS): 4 ಹಂತಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಈ ಹಿಂದೆ ಕೈಗೊಂಡ ನಿರ್ಧಾರ ಮಾರ್ಪಾಡುಗೊಳಿಸಲು ರಾಜ್ಯ ಸರಕಾರ ಮುಂದಾಗಿದ್ದು, ಈ ಯೋಜನೆಗೆ ಅಗತ್ಯವಾದ ಸಂಪೂರ್ಣ ಹಣವನ್ನು ಈ ಸಲದ ಬಜೆಟ್ ನಲ್ಲೇ ನಿಗದಿಮಾಡುವ ಮೂಲಕ ಒಂದೇ ಹಂತದಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳ 20 ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಫೆಬ್ರವರಿ 8ರಂದು ತಾವು ಮಂಡಿಸಲಿರುವ ಬಜೆಟ್ನಲ್ಲಿ ಸಾಲ ಮನ್ನಾ ಯೋಜನೆಗೆ ಅಗತ್ಯವಾದ ಹಣವನ್ನು ಒಂದೇ ಕಂತಿನಲ್ಲಿ ನಿಯೋಜನೆ ಮಾಡುವುದರ ಜತೆಗೆ ಮಧ್ಯವರ್ತಿಗಳ ಹಾವಳಿಗೆ ಅವಕಾಶವಿಲ್ಲದಂತೆ ಯೋಜನೆಯ ಸಂಪೂರ್ಣ ಫಲ ರೈತರ ಖಾತೆಗೆ ಜಮೆ ಆಗುವ ರೀತಿಯಲ್ಲಿ ಸರಕಾರ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಹೇಳಿದ್ದಾರೆ
ಸಾಲ ಮನ್ನಾದ ಬಗ್ಗೆ ಕೆಲವರು ಮಾಡುತ್ತಿರುವ ಅಪಪ್ರಚಾರಕ್ಕೆ ನಾನು ಉತ್ತರ ಕೊಡಬೇಕಿಲ್ಲ. ರೈತ ಬಂಧುಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಈ ಸರಕಾರದ ಮೇಲೆ ವಿಶ್ವಾಸವಿಡಿ ಎಂದು ಮನವಿ ಮಾಡಿದರು.
ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಸಾಲ ಪಡೆದ 76 ಸಾವಿರ ಫಲಾನುಭವಿಗಳು, ಸಹಕಾರ ಬ್ಯಾಂಕ್ನಲ್ಲಿ ಸಾಲ ಪಡೆದ 1.14 ಲಕ್ಷ ಫಲಾನುಭವಿಗಳ 1300 ಕೋಟಿ ರೂ. ಸಾಲವನ್ನು ಇದುವರೆಗೆ ಮನ್ನಾ ಮಾಡಲಾಗಿದೆ. 1300 ಕೋಟಿ ರೂ.ಯನ್ನು ಇದುವರೆಗೆ ಹಂಚಿಕೆ ಮಾಡಲಾಗಿದ್ದು, ಜ.11ರವರೆಗೆ 856 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಹಿಂದೆ ನಾಲ್ಕು ಹಂತದಲ್ಲಿ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಒಂದೇ ಹಂತದಲ್ಲಿ ಸಾಲ ಮನ್ನಾ ಮಾಡಲಾಗುತ್ತದೆ. ಈ ಬಜೆಟ್ನಲ್ಲಿ ಅಗತ್ಯವಾದ ಹಣ ನಿಗದಿ ಮಾಡುವ ಸಕಾರಾತ್ಮಕ ನಿರ್ಣಯವನ್ನು ಸರಕಾರ ತೆಗೆದುಕೊಂಡಿದೆ ಎಂದು ವಿವರಿಸಿದರು.