ಉಡುಪಿ, ಜು 27 (DaijiworldNews/HR): ದ.ಕ ಜಿಲ್ಲೆಯ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಹಿಂದೂ ಸಂಘಟನೆಯ ಧುರೀಣ ಪ್ರವೀಣ್ ಹತ್ಯೆಗೈದಿರುವ ಘಟನೆಯ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಈ ರೀತಿಯ ಹೇಯಕೃತ್ಯ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ. ಮೃತ ಪ್ರವೀಣನ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಆತನ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿರುವ ಶ್ರೀಗಳು, ನಾಡಿನಲ್ಲಿ ಇಂಥಹ ದುಷ್ಕೃತ್ಯಗಳು ಮೇಲಿಂದ ಮೇಲೆ ನಡೀತಾ ಇರೋದ್ರಿಂದ ಜನಾಕ್ರೋಶಗೊಂಡು ಸರ್ಕಾರದ ಮೇಲೆ ವಿಶ್ವಾಸವನ್ನೇ ಕಳಕೊಳ್ಳುವ ಸ್ಥಿತಿ ತಲುಪುತ್ತಿರುವಂತಿದೆ ಅದಕ್ಕೂ ಮೊದಲೇ ಸರ್ಕಾರ ಇಂಥಹ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಪ್ರವೀಣ ನಹತ್ಯೆಯಿಂದ ನಾಡಿನ ಸಹಸ್ರಾರು ಹಿಂದೂ ಯುವ ಕಾರ್ಯಕರ್ತರು ಆಕ್ರೋಶ ಉಲ್ಬಣಿಸಲು ಕಾರಣವಾಗುತ್ತಿದೆ. ಇತ್ತೀಚೆಗಷ್ಟೆ ಹರ್ಷನ ಹತ್ಯೆಯ ದುಃಖ ನೋವಿನಿಂದ ಹೊರಬರುವ ಹೊತ್ತಿಗೇ ಇನ್ನೊಬ್ಬ ತರುಣನ ಕೊಲೆಯಾಗಿರೋದು ಸಹನೆಯ ಕಟ್ಟೆ ಒಡೆಯುವಷ್ಟು ದುಃಖ ಆಕ್ರೋಶ ತರಿಸೋದು ಸಹಜವೇ ಆಗಿದ್ದರೂ ಯಾರೊಬ್ಬರೂ ಧೈರ್ಯ ಕಳಕೊಳ್ಳಬಾರದು . ಸಂಯಮವನ್ನು ಒಗ್ಗಟ್ಟನ್ನು ಕಾಯ್ದುಕೊಂಡು ಕೆಲಸ ಮಾಡಬೇಕಾಗಿದೆ . ನಾವುಗಳೂ ತಮ್ಮೆಲ್ಲರ ನೋವಿನಲ್ಲಿ ಸಹಾನುವರ್ತಿಗಳು ಎಂದು ಶ್ರೀಗಳು ತಿಳಿಸಿದ್ದಾರೆ.