ಕಲಬುರಗಿ, ಜ26(SS): ಪ್ರಿಯಾಂಕಾ ಬಂದಿರುವುದರಿಂದ ಬಿಜೆಪಿ ಅವರಿಗೆ ಭಯ ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಜನ ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ. ಮಾರ್ಕೆಟಿಂಗ್ ಮಾಡಿ ಮೋದಿಯನ್ನು ಗದ್ದುಗೆ ಮೇಲೆ ಕೂರಿಸಿದ್ದರು. ಇದೀಗ ಅವರ ಗ್ರಾಫ್ ಕಡಿಮೆಯಾಗಿದೆ. ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿದ್ದರಿಂದ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ ಇದು ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಉಮೇಶ್ ಜಾಧವ್ಗೆ ಮಂತ್ರಿ ಸ್ಥಾನ ತಪ್ಪಲು ಖರ್ಗೆ ಕಾರಣ ಎನ್ನುವ ಆರೋಪವಿದೆ. ಆರೋಪ ಮಾಡುವವರು ಮಾಡಲಿ, ನನ್ನ ಬಗ್ಗೆ ಮಾತನಾಡುವವರು ಆಡಲಿ. ನಾನು ಐವತ್ತು ವರ್ಷ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಬೇರೆಯವರ ಟೀಕೆಗೆ ಸ್ವಾಗತ ಎಂದು ಹೇಳಿದರು.
ನಡೆದಾಡುವ ದೇವರ ವಿಚಾರವಾಗಿ ಮಾತನಾಡಿದ ಅವರು, ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದೆವು. ಈ ಹಿಂದೆ ಕೂಡ ಕರ್ನಾಟಕ ಸರ್ಕಾರದಿಂದ, ಸಂಸದರಿಂದ ಮನವಿ ಮಾಡಿದ್ದೆವು. ಆದರೆ, ಬಿಜೆಪಿ ಸರ್ಕಾರ ಯಾವುದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಪುರಸ್ಕಾರ ದೊರೆತಿದೆ ಎಂದು ಹೇಳಿದರು.
ಯಾರಿಗೆ ಸಿಗಬೇಕಾಗಿತ್ತೋ ಅವರಿಗೆ ಸಿಕ್ಕಿಲ್ಲ. ಇದು ನನಗೆ ತೀರಾ ಬೇಸರ ತರಿಸಿದೆ.ಇದು ಕರ್ನಾಟಕ ರಾಜ್ಯದ ಜನರಿಗೆ ಮಾಡಿದ ಅವಮಾನ. ಶ್ರೀಗಳು ಶಿಕ್ಷಣ, ದಾಸೋಹ ಸೇರಿದಂತೆ ಸಮಾಜಕಾರ್ಯಗಳನ್ನು ಮಾಡಿದ್ದಾರೆ. ಗಾಯಕರಿಗೆ, ಆರ್ಎಸ್ಎಸ್ ಹಿನ್ನೆಲೆಯುಳ್ಳವರಿಗೆ ಪ್ರಶಸ್ತಿ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.