ಕಾಸರಗೋಡು, ಜು 27 (DaijiworldNews/HR): ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ ಎಂಬ ಪೈಂಟರ್ ಸಾಲದ ಸುಳಿಯಲ್ಲಿ ಸಿಲುಕಿ ಹೊಸದಾಗಿ ನಿರ್ಮಿಸಿದ ಮನೆಯನ್ನೇ ಮಾರಲು ಹೊರಟಾಗ ಅವರಿಗೆ 1 ಕೋಟಿ ರೂಪಾಯಿ ಲಾಟರಿ ಬಹುಮಾನ ಸಿಕ್ಕಿರುವ ಘಟನೆ ನಡೆದಿದೆ.
ಮೊಹಮ್ಮದ್ ಬಾವ ಎಂಟು ತಿಂಗಳ ಹಿಂದೆ ಮನೆಯನ್ನು ನಿರ್ಮಿಸಿದ್ದು, ಇದನ್ನು ನಿರ್ಮಿಸಲು ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೇ, ಮನೆಯನ್ನೇ ಮಾರಾಟಕ್ಕಿಟ್ಟಾಗಲೇ ಅದೃಷ್ಟ ಎಂಬಂತೆ 1 ಕೋಟಿ ರೂಪಾಯಿಯ ಲಾಟರಿ ಬಹುಮಾನ ಬಂದಿದೆ.
ಈ ಬಗ್ಗೆ ಮಾತನಾಡಿರುವ ಬಾವ, ನಾನು ನಮ್ಮ ಮನೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈಗಲೂ ನನಗೆ ಲಾಟರಿ ಹೊಡೆದಿದೆ ಎಂದು ನಂಬಲಾಗುತ್ತಿಲ್ಲ. ನಮ್ಮ ಮನೆ ಖರೀದಿಸಲು ಟೋಕನ್ ಹಣ ನೀಡಲು ಬರುವುದಾಗಿ ವ್ಯಕ್ತಿಯೊಬ್ಬರು ಹೇಳಿದ್ದರು. ನಮಗೆ 45 ಲಕ್ಷ ರೂಪಾಯಿ ಸಾಲ ಇರುವುದರಿಂದ ಮನೆಗೆ 45 ಲಕ್ಷ ರೂಪಾಯಿ ಬೇಕಿತ್ತು. ಆದರೆ ದಲ್ಲಾಳಿ ಮೂಲಕ ಅಂತಿಮವಾಗಿ 40 ಲಕ್ಷ ರೂ. ಗೆ ಮನೆ ಮಾರಲು ನಾವು ಒಪ್ಪಿಕೊಂಡೆವು. ಹೀಗಾಗಿ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಗೆ ತೆರಳಿದೆವು ಎಂದರು.
ಇನ್ನು ಕೇರಳ ಸರ್ಕಾರ ನಡೆಸುವ ಫಿಫ್ಟಿ-ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್ಗಳನ್ನು ನಾನು ಖರೀದಿಸಿದ್ದು, ಇದೀಗ ಆದಾಯ ತೆರಿಗೆ ಕಡಿತವಾಗಿ ಸುಮಾರು 63 ಲಕ್ಷ ರೂ. ಬಾವ ಕೈಸೇರಲಿದೆ ಎಂದು ತಿಳಿಸಿದ್ದಾರೆ.