ಕಡಬ, ಜು 27 (DaijiworldNews/DB): ಚಾರ್ಜ್ಗಿಟ್ಟಿದ್ದ ಮೊಬೈಲ್ನ್ನು ಚಾರ್ಜರ್ನಿಂದ ತೆಗೆಯುವ ವೇಳೆ ವಿದ್ಯುತ್ ಶಾಕ್ ತಗುಲಿ ಬಾಲಕ ಮೃತಪಟ್ಟ ಘಟನೆ ಸಿರಿಬಾಗಿಲು ಗ್ರಾಮದ ಅಡ್ಡಹೊಳೆ ಬಳಿಯ ಪುಳ್ಳೊಟ್ಟುವಿನಲ್ಲಿ ಮಂಗಳವಾರ ನಡೆದಿದೆ.
ಮೋನಚ್ಚ ಮತ್ತು ಬೀನಾ ದಂಪತಿಯ ಪುತ್ರ ರಫೀನ್ (14) ಮೃತಪಟ್ಟ ಬಾಲಕ. ಬಾಲಕ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಪುಳ್ಳೊಟ್ಟುವಿನ ಅಜ್ಜಿ ಸುಂದರಿ ಅವರ ಮನೆಯಲ್ಲಿ ವಾಸಿಸುತ್ತಿದ್ದ, ಕಳೆದ ಕೆಲ ದಿನಗಳ ಹಿಂದೆ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ. ಮಂಗಳವಾರ ಪೆರಮಜಲು ಙಾಸುಪಾಸಿನ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕ ಮಧ್ಯಾಹ್ನ 2.30ರ ಸುಮಾರಿಗೆ ಮಳೆಯ ಕಾರಣದಿಂದ ಮನೆಗೆ ಹಿಂತಿರುಗಿ ತನ್ನ ಮೊಬೈಲ್ ಫೋನ್ನನ್ನು ಚಾರ್ಜ್ಗೆ ಇಟ್ಟಿದ್ದ. ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ಮಿಂಚು ಕಡಿಮೆಯಾದ ಬಳಿಕ ಚಾರ್ಜರ್ನಿಂದ ಮೊಬೈಲ್ನ್ನು ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ಒಮ್ಮೆಲೆ ವಿದ್ಯುತ್ ಶಾಕ್ ಪ್ರವಹಿಸಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಂಬಾರು ಗ್ರಾಮ ಪಂಚಾಯತ್ನಡಿ ಬೆಳಕು ಯೋಜನೆ ಮೂಲಕ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.
ಕೆಲವೇ ದಿನಗಳ ಹಿಂದಷ್ಟೇ ಬಾಲಕ ಮೊಬೈಲ್ ಖರೀದಿಸಿದ್ದ ಎನ್ನಲಾಗಿದೆ. ಮೃತ ಬಾಲಕ ತಂದೆ ತಾಯಿ ಮತ್ತು ಸಹೋದರನನ್ನು ಅಗಲಿದ್ದಾನೆ.
ಮೆಸ್ಕಾಂ ಅಧಿಕಾರಿಗಳಾದ ಎಇಇ ಸಜಿಕುಮಾರ್, ಜೆಇ ರಮೇಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಿತಾ, ಸದಸ್ಯ ಗಣೇಶ್ ಮತ್ತಿತರು ಮೃತ ಬಾಲಕನ ಮನೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಠಾಣೆಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.