ಪುತ್ತೂರು, ಜು 27 (DaijiworldNews/HR): ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್(32) ಅವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಖಂಡಿಸಿ ಪುತ್ತೂರು ಬೆಳ್ಳಾರೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡು ಬಸ್ನ ಮೇಲೆ ಕಲ್ಲೆಸೆದಿರುವ ಘಟನೆ ನಡೆದಿದೆ.
ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಬೊಳುವಾರಿನಲ್ಲಿ ಕಲ್ಲೆಸೆದಿದ್ದು, ಬಸ್ನ ಮುಂಬಾಗದ ಗಾಜು ಹುಡಿಯಾಗಿದೆ.
ಪ್ರವೀಣ್ ನೆಟ್ಟಾರುರವರ ಹತ್ಯೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಪುತ್ತೂರಿನಲ್ಲಿ 144ರ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ
ಇನ್ನು ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳೂ ಕರೆ ನೀಡಿರುವ ಬಂದ್ ಗೆ ಬೆಂಬಲಿಸಿ ಪುತ್ತೂರಿನ ವಿವೇಕಾನಂದ ಕಾಲೇಜು ಮತ್ತು ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಿಗೆ, ಪ್ರಗತಿ ಸ್ಟಡಿ ಸೆಂಟರ್ಗೆ ರಜೆ ಘೋಷಣೆ ಮಾಡಲಾಗಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರವೀಣ್ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಪ್ರವೀಣ್ ಮೃತದೇಹ ಇಡಲಾಗಿದ್ದು, ಮೆರವಣಿಗೆ ಮೂಲಕ ಮೃತದೇಹ ಸಾಗಿಸಲು ಬಿಜೆಪಿ ಕಾರ್ಯಕರ್ತರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಬರ್ಬರವಾಗಿ ಹತ್ಯೆ ಮಾಡಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು.