Karavali
ಮಂಗಳೂರು: ಹೆದ್ದಾರಿಗಳು ಮರಣದ ರಹದಾರಿಯಾಗದಿರಲಿ-ಮೃತ್ಯು ಕೂಪಗಳಿಗೆ ಸರಕಾರವೇ ಮುಕ್ತಿ ನೀಡಲಿ
- Tue, Jul 26 2022 11:16:49 PM
-
ಸಂತೋಷ್ ಎಂ.
ಮಂಗಳೂರು, ಜು 26 (DaijiworldNews/SM): ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆ, ರಾಜ್ಯ ಅಂತರಾಜ್ಯಗಳನ್ನು ಸಂಪರ್ಕಿಸಲು ಇರುವ ಸಂಪರ್ಕ ಕೊಂಡಿ. ವೇಗದ ಪ್ರಯಾಣದ ಮೂಲಕ ನಿಗದಿತ ಸಮಯದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ ಸುಲಭ ಮಾರ್ಗ. ಆದರೆ, ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಬೇಕಾದರೆ, ಜೀವದ ಹಂಗು ಬಿಟ್ಟಿರಬೇಕು. ಸುರಕ್ಷಿತವಾಗಿ ತಲುಪುತ್ತೇವೆ ಎನ್ನುವ ಯಾವುದೇ ಲೆಕ್ಕಾಚಾರ ಹಾಕಿರಬಾರದು.
ದ.ಕ. ಉಡುಪಿ ಜಿಲ್ಲೆಗಳಲ್ಲಿ ಹಾದು ಹೋಗಿರುವ ಈ ಹೆದ್ದಾರಿಯಲ್ಲಿ ಪ್ರತೀ ಮಳೆಗಾಲದಲ್ಲಿ ಅವ್ಯವಸ್ಥೆಯಿಂದಲೇ ಕೂಡಿರುತ್ತದೆ. ಹೆದ್ದಾರಿಯುದ್ದಕ್ಕೂ ಹೊಂಡ ಗುಂಡಿಗಳು ನಿರ್ಮಾಣಗೊಂಡು ಸಂಚರಿಸಲಾಗದ ದುಸ್ಥಿತಿ. ಕಣ್ಣು ಹಾಯಿಸಿದಷ್ಟು ದೂರ ಹೆದ್ದಾರಿಯಲ್ಲಿ ಗುಂಡಿಗಳದ್ದೇ ದರ್ಶನ. ಒಂದು ಹೊಂಡ ತಪ್ಪಿಸಲೆತ್ನಿಸಿದರೆ, ಮತ್ತೊಂದಕ್ಕೆ ಬೀಳುವುದರಲ್ಲಿ ಅನುಮಾನವೇ ಇಲ್ಲ. ನಿತ್ಯ ಲಕ್ಷಾಂತರ ವಾಹನಗಳ ಸಂಚಾರ ಈ ಹೆದ್ದಾರಿಗಳಲ್ಲಿವೆ. ಹೊಂಡಗಳಲ್ಲಿ ವರುಣಾರ್ಭಟದ ವೇಳೆ ಕೆಸರು ಮಿಶ್ರಿತ ನೀರು ಸಂಗ್ರಹವಾಗಿತ್ತದೆ. ಮಳೆಯ ವೇಳೆಯಲ್ಲಿ ಹೊಂಡಗಳು ಗೋಚರಕ್ಕೆ ಬರದೆ, ದ್ವಿಚಕ್ರ ವಾಹನ ಸವಾರರು ನೆಲಕ್ಕುರುಳಿದ ದೃಷ್ಟಾಂತಗಳು ಒಂದೆರಡಲ್ಲ. ರಸ್ತೆ ಮೇಲೆ ಬಿದ್ದ ಸವಾರರ ಮೇಲೆ ಘನ ವಾಹನ ಯಮಧೂತವಾಗಿ ಎರಗಿರುವ ಸನ್ನಿವೇಶಗಳು ಕಣ್ಣೆದುರು ಜೀವಂತವಾಗಿವೆ. ಬೆಳಗ್ಗೆ ಕೆಲಸಕ್ಕೆ ಹೋಗೆ ಸಂಜೆ ಮನೆ ತಲುಪುವ ಬದಲು ಶಿವನ ಪಾದ ಸೇರಿದ ಉದಾಹರಣೆಗಳೂ ಅನೇಕ. ಇಂತಹ ಕೆಲವು ಕುಟುಂಬಗಳು ಆಧಾರವನ್ನೇ ಕಳೆದುಕೊಂಡು ಇಂದು ಕಣ್ಣೀರ ಕಡಲಲ್ಲಿ ಮುಳುಗಿವೆ.
ಇನ್ನು ಹೆದ್ದಾರಿಯಲ್ಲಿ ದ್ವಿಚಕ್ರವಾಹನಗಳು ಸಂಚರಿಸುವ ವೇಳೆಯಲ್ಲಿ ಘನವಾಹನಗಳು ಹೊಂಡಗುಂಡಿಗಳಿದ್ದರೂ ಬೇಕಾಬಿಟ್ಟಿ ಚಲಾಯಿಸುವ ಕಾರಣದಿಂದಾಗಿ ಕೆಸರು ಮಿಶ್ರಿತ ನೀರಿನ ಸಿಂಚನವಾಗುವುದು ಸಾಮಾನ್ಯವಾಗಿದ್ದು, ಮೈಯುಜ್ಜಿ, ಹಿಡಿಶಾಪ ಹಾಕುತ್ತಾ ಪ್ರಯಾಣ ಬೆಳೆಸುತ್ತಾರೆ. ಇದು ಒಂದೆರಡು ದಿನದ ಸಮಸ್ಯೆಯಲ್ಲ. ದ್ವಿಚಕ್ರ ವಾಹನ ಸವಾರರ ನಿತ್ಯದ ನರಕದ ಪಾಡು. ಹೆದ್ದಾರಿಯ ಅವ್ಯವಸ್ಥೆಯನ್ನು ಹೇಳೋರಿಲ್ಲ. ಕೇಳೋರಿಲ್ಲ. ಎಷ್ಟೇ ಬಡಿದಾಡಿದರೂ ದಪ್ಪ ಚರ್ಮದ ಆಡಳಿತದಲ್ಲಿರುವ ಮೇಲ್ವರ್ಗಕ್ಕೆ ನಾಟುತ್ತಿಲ್ಲ. ಇಂತಹ ಹೆದ್ದಾರಿಗಳಲ್ಲಿ ಬಿದ್ದು ನರಳಾಡುವುದು ಮಾತ್ರ ಸಾಮಾನ್ಯಜನರು. ರಾಷ್ಟ್ರೀಯ ಹೆದ್ದಾರಿಯೆಂಬ ಹಣೆಪಟ್ಟಿ ಹೊತ್ತಿರುವ ಮರಣದ ರಹದಾರಿಯಾಗುತ್ತಿದೆ. ಸಂಚರಿಸಿದಷ್ಟು ದೂರ ಗಜಗಾತ್ರದ ಮೃತ್ಯು ಕೂಪಗಳು ಬಲಿ ಪಡೆಯಲು ಬಾಯ್ದೆರೆದು ನಿಂತಿವೆ.
ಮೃತ್ಯು ಕೂಪಗಳಿಗಿಲ್ಲ ಮುಕ್ತಿ:
ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು, ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳು, ಅಲ್ಲದೆ, ಅನಾರೋಗ್ಯದ ವೇಳೆ ರೋಗಿಗಳು ಎಲ್ಲರಿಗೂ ಅಗತ್ಯವೆಣಿಸಿದ ಹೆದ್ದಾರಿಯಾಗಿದ್ದರೂ, ಇದು ಯಾವೊಬ್ಬ ಜನ ನಾಯಕನಿಗೂ ಅರಿವಿಲ್ಲ. ಆ ಕಾರಣದಿಂದಾಗಿ ಈ ರಸ್ತೆಗಳು ದುರಸ್ಥಿ ಕಾಣುತ್ತಿಲ್ಲ. ಅಧಿಕಾರಿಗಳು, ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ಅವ್ಯವಸ್ಥೆಯ ಆಗರವಾಗಿರುವುದು.ಕಳಪೆ ಕಾಮಗಾರಿಗೆ ಕಡಿವಾಣವೆಂದು?
ಬಹುತೇಕ ಹೆದ್ದಾರಿಗಳು ನಿರ್ಮಾಣಗೊಂಡು ಅರ್ಥತ್, ಡಾಮರೀಕರಣಗೊಂಡು ವರ್ಷ ಪೂರ್ಣಗೊಳ್ಳುವಷ್ಟರಲ್ಲಿ ತನ್ನ ನಿಜ ಬಣ್ಣ ಬಹಿರಂಗಗೊಳಿಸುತ್ತವೆ. ಎಷ್ಟೇ ಉತ್ತಮವಾಗಿ ಕಾಮಗಾರಿ ನಡೆಸಿದರೂ ಕೆಲವು ಭಾಗಗಳಲ್ಲಿ ಚರಂಡಿಗೆ ಜಾಗ ಇಲ್ಲದಿರುವುದು ಇದರಿಂದಾಗಿ ರಸ್ತೆಯೇ ಚರಂಡಿ ಹರಿವಿಗೆ ಮೂಲವಾಗಿ ಪರಿಣಮಿಸುತ್ತದೆ. ಮತ್ತೆ ಕೆಲವು ಭಾಗಗಳಲ್ಲಿ ಡಾಂಬರಿನ ಅಂಚಿಗೆ ವ್ಯವಸ್ಥಿತ ಕ್ರಮ ಕೈಗೊಳ್ಳದೇ ಇರುವುದು.ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡ ವಿದ್ಯಾರ್ಥಿನಿ:
ರಾಷ್ಟ್ರೀಯ ಹೆದ್ದಾರಿ ೬೬ರ ತೊಕ್ಕೊಟ್ಟು ಸೇತುವೆಯಲ್ಲಿ ಹಳೆ ಸೇತುವೆಯ ಕಾಂಕ್ರಿಟ್ ಎದ್ದುಹೋಗಲಾರಂಭಿಸಿದೆ. ಈ ಪರಿಣಾಮದಿಂದಾಗಿ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣಗೊಂಡಿದ್ದು, ಕಳೆದ ಕೆಲವು ಸಮಯಗಳಿಂದ ಈ ಹೊಂಡಗಳು ಬಲಿಗಾಗಿ ಕಯುತ್ತಿವೆ. ಇದೇ ಹೊಂಡಕ್ಕೆ ಭಾರೀ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯೋರ್ವಳ ದ್ವಿಚಕ್ರ ವಾಹನ ಬಿದ್ದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟು ಆಕೆ ಗಂಭೀರ ಸ್ವರೂಪದ ಗಾಯಗೊಂಡಿದ್ದಾಳೆ. ಮಂಗಳೂರು ವಿವಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಆಕೆ ಮುಂದಿನ ತಿಂಗಳು ಯುಜಿಸಿ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಆದರೆ, ಸದ್ಯ ಕೈ ಮೂಳೆ ಮುರಿತದಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಳೆ. ಪರೀಕ್ಷೆ ಬರೆಯಲಾಗದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.ಇತ್ಯ ಇಂತಹ ನೂರೆಂಟು ಅಪಘಾತಗಳಾಗುತ್ತಿವೆ. ಬಿದ್ದವರು ಎದ್ದು ಬೇನೆಯುಂಡು ತೆರಳುತ್ತಾರೆ. ಆಸ್ಪತ್ರೆಯಲ್ಲಿ ದುಡಿಮೆಯ ಹಣವನ್ನು ಬಿಲ್ ರೂಪದಲ್ಲಿ ಪಾವತಿಸಿ ಮತ್ತೆ ಸಂಕಟಪಡುತ್ತಾರೆ. ಆದರೆ, ತುಟಿಬಿಚ್ಚಿ ಹೇಳುವ ದೈರ್ಯ ಯಾರಲ್ಲೂ ಇಲ್ಲ. ಕೆಲವೊಮ್ಮೆ ಬಡಿದಾಡಿದರೂ ಉತ್ತರ ಸಿಗಲ್ಲ. ಬಡವರ ನೋವಿನ ಕೂಗು ಜನನಾಯಕರಿಗೆ ಕೇಳುತ್ತಿಲ್ಲ.
ಅವ್ಯವಸ್ಥೆಗಳಿದ್ದರೂ ಕ್ರಮವಿಲ್ಲ-ಟೋಲ್ ಪಡೆಯದೇ ಇರುವ ದಿನವಿಲ್ಲ:
ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಸುಂಕ ವಸೂಲಿ ಕೇಂದ್ರಗಳು ತಲೆ ಎತ್ತಿಕೊಳ್ಳುತ್ತವೆ. ನಿಯಮದ ಪ್ರಕಾರ ೬೦ ಕಿ.ಮೀ. ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸಬೇಕು. ಹಾಗೂ ಆ ವ್ಯಾಪ್ತಿಯಲ್ಲಿ ಹೆದ್ದಾರಿಯನ್ನು ನಿರ್ವಹಣೆಯ ಜವಾಬ್ದಾರಿ ಅವರದು. ಆದರೆ, ದ.ಕ. ಉಡುಪಿ ಜಿಲ್ಲೆಯಲ್ಲಿ ಟೋಲ್ ಗೇಟ್ ಗಳು ನಾಯಿಕೊಡೆಯಂತೆ ತಲೆ ಎತ್ತಿನಿಂತಿವೆ. ಜನಸಾಮಾನ್ಯರನ್ನು ಹಗಲು ದರೋಡೆ ನಡೆಸುತ್ತಿವೆ. ಫಾಸ್ಟ್ ಟ್ಯಾಗ್ ಎಂಬ ಅಸ್ತ್ರ ಬಳಸಿ ಹಣದ ಹೊಳೆ ಸಂಗ್ರಹವಾಗುತ್ತಿದ್ದು, ಫಾಸ್ಟ್ ಟ್ಯಾಗ್ ಇಲ್ಲದವರು ಇವರ ಪಾಲಿಗೆ ಅಪರಾಧಿಗಳಂತೆ. ಸಿಕ್ಕಿದ್ದೇ ಅವಕಾಶ ಎಂದು ದುಪ್ಪಟ್ಟು ಮೂರುಪಟ್ಟು ವಸೂಲಿ ಮಾಡುತ್ತಾರೆ.ಆದರೆ, ಇದೇ ನಿರ್ವಹಣೆ ವಿಚಾರಕ್ಕೆ ಬಂದಾಗ ಅದು ತಮ್ಮ ಕಾರ್ಯವಲ್ಲ ಎಂಬಂತೆ ವರ್ತಿಸುತ್ತಾರೆ. ಗುತ್ತಿಗೆ ಪಡೆದ ಕಂಪೆನಿ ಸರಕಾರಕ್ಕೂ ಜಗ್ಗದೆ ಎದೆಯೊಡ್ಡಿ ನಿಲ್ಲುತ್ತಿರುವುದು ವಿಪರ್ಯಾಸ. ಶಾಸಕರು, ಸಚಿವರ ಮಾತಿಗೂ ಕೂಡ ಇಲ್ಲಿ ಬೆಲೆ ಇಲ್ಲ.
ಅನಾಹುತಗಳು ನಡೆಯುತ್ತಿವೆ. ಸಾವು ನೋವುಗಳು ಸಂಭವಿಸುತ್ತಲೇ ಇದೆ. ಅಷ್ಟಿದ್ದರೂ ಸರಕಾರಕ್ಕೆ ಮಾತ್ರ ಗುತ್ತಿಗೆ ವಹಿಸಿಕೊಂಡ ಕಂಪೆನಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅವ್ಯವಸ್ಥೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಂದರೆ, ಸರಕಾರ, ಇಲಾಖೆ, ಸಚಿವರನ್ನು ಈ ಕಂಪೆನಿಗಳು ಕೈಗೊಂಬೆಯನ್ನಗಿಸಿದಂತೆ ಭಾಸವಾಗುತ್ತಿದೆ.
ಸರಕಾರ, ಇಲಾಖೆ, ಸಚಿವರುಗಳು ಸ್ಥಳೀಯವಾಗಿರುವ ಶಾಸಕರು ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಸೂಕ್ತ ರೀತಿಯ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.