ಬೆಳ್ಳಾರೆ, ಜು 26 (DaijiworldNews/SM): ಇಲ್ಲಿನ ಜಂಕ್ಷನ್ ನಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರವೀಣ್ ಚಿಕಿತ್ಸೆ ಪಲಿಸದೆ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ವೇಳೆ ವರದಿಯಾಗಿದೆ.
ಬೆಳ್ಳಾರೆ ಜಂಕ್ಷನ್ ನಲ್ಲಿ ಕೋಳಿ ಅಂಗಡಿ ಹೊಂದಿದ್ದ ಪ್ರವೀಣ್ ಸಂಜೆ ವೇಳೆ ಅಂಗಡಿಯ ಬಾಗಿಲು ಮುಚ್ಚಲು ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಪ್ರವೀಣ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನೆಟ್ಟಾರು ನಿವಾಸಿಯಾಗಿರುವ ಪ್ರವೀಣ್ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಬಿಜೆಪಿ ಯುವ ಮೋರ್ಚ ಮುಖಂಡನಾಗಿದ್ದ ಎಂದು ತಿಳಿದುಬಂದಿದೆ.
ಇನ್ನು ಬೆಳ್ಳಾರೆಯಲ್ಲಿ ವಾರದ ಹಿಂದೆಯಷ್ಟೇ ಮುಸ್ಲಿಂ ಯುವಕನೋರ್ವನ ಕೊಲೆ ನಡೆಸಲಾಗಿತ್ತು. ಮಾತುಕತೆಯ ನೆಪದಲ್ಲಿ ಯುವಕನಿಗೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಯುವ ನಾಯಕನ ಹತ್ಯೆ ನಡೆದಿದ್ದು, ಯಾವ ಕಾರಣಕ್ಕೆ ಹತ್ಯೆ ಗೈಯಲಾಗಿದೆ ಎಂದು ಪೊಲೀಸರು ತನಿಖೆ ಮುನ್ನಡೆಸುತ್ತಿದ್ದಾರೆ.
ಬೆಳ್ಳಾರೆಯಲ್ಲಿ ವಾರದ ಅಂತರದಲ್ಲಿ ಎರಡನೇ ಹತ್ಯೆ ನಡೆದಿದ್ದು, ಬೆಳ್ಳಾರೆ ಪೇಟೆ ಸೇರಿದಂತೆ ಸುತ್ತಮುತ್ತ ಬಿಗುಬಂದೋಬಸ್ತ್ ಏರ್ಪಡಿಸಲಾಗಿದೆ.