ಮಂಗಳೂರು, ಜು 26 (DaijiworldNews/SM): ನಗರದಲ್ಲಿ ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಾರ್ ಮುಂದೆ ನಡೆದ ಘಟನೆ ಬ್ರಾಂಡ್ ಮಂಗಳೂರಿಗೆ ಹೊಡೆತ ಕೊಟ್ಟಿದೆ. ಸಮಾಜದ್ರೋಹಿ ಶಕ್ತಿಗಳು ಮತ್ತು ದಾರಿ ತಪ್ಪಿದ ಯುವಕರಿಂದ ಕೃತ್ಯವಾಗಿದೆ. ಇದರಿಂದ ಬ್ರಾಂಡ್ ಮಂಗಳೂರು ಗೌರವಕ್ಕೆ ಕಪ್ಪು ಚುಕ್ಕೆಯಾಗಿದೆ. ಇದು ಭವಿಷ್ಯದ ಮಂಗಳೂರಿನ ಅಭಿವೃದ್ಧಿಗೆ ಮಾರಕವಾಗಿದೆ. ಹೀಗಾಗಿ ಇಂಥವರನ್ನ ಪತ್ತೆ ಹಚ್ಚಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.
ಈ ವ್ಯಾಪಾರಸ್ಥರು ಕೋವಿಡ್ ನಿಂದ ನಷ್ಟಕ್ಕೆ ಒಳಗಾಗಿದ್ದಾರೆ. ಟ್ಯಾಕ್ಸ್, ಜಿಎಸ್ ಟಿ ಕಟ್ಟುವ ಜೊತೆ ಈ ರೌಡಿಗಳಿಗೆ ಹಫ್ತಾ ಕೊಡಬೇಕು. ಇದೊಂದು ಇವರ ಹಫ್ತಾ ವಸೂಲಿ ತಂತ್ರ ಅಷ್ಟೇ. ಸರ್ಕಾರ ಇದನ್ನ ಗಮನಿಸಲಿ, ಜನರ ನೆಮ್ಮದಿ ಹಾಳಾಗ್ತಿದೆ. ಈ ಘಟನೆಗಳಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಪ್ರೇರಣೆಯಾಗಿದೆ. ಸಿಎಂ ಹೇಳಿದ ಆಕ್ಷನ್ ರಿಯಾಕ್ಟನ್ ಹೇಳಿಕೆ ಈ ಯುವಕರ ತಲೆಯಲ್ಲಿ ಇದೆ. ಇದೇ ಕಾರಣದಿಂದಾಗಿ ಇಂತಹ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. ಅಲ್ಲಿದ್ದ ಮಕ್ಕಳಿಗೆ ತಂದೆ-ತಾಯಿ ಇದ್ದಾರೆ, ಅದನ್ನ ಕೇಳೋಕೆ ಇವರ್ಯಾರು? ಎಂದು ಖಾದರ್ ಪ್ರಶ್ನಿಸಿದ್ದಾರೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನ ಸಮಗ್ರ ತನಿಖೆ ನಡೆಸಲಿ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.