ಬೆಂಗಳೂರು, ಜ26(SS): ಭಾರತದ 3 ಸಾಧಕರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ಗೌರವವನ್ನು ಘೋಷಿಸಿದ್ದು, ಆದರೆ ಈ ಪಟ್ಟಿಯಲ್ಲಿ 'ನಡೆದಾಡುವ ದೇವರು' ಸಿದ್ದಗಂಗಾ ಶ್ರೀಗಳ ಹೆಸರು ಇಲ್ಲದಿರುವುದು ರಾಜ್ಯದ ಜನರಲ್ಲಿ ಆಕ್ರೋಶ ಮೂಡಿಸಿದೆ.
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸಂಗೀತ ಮಾಂತ್ರಿಕ ಭೂಪೇನ್ ಹಜಾರಿಕಾ, ಜೆಪಿ ಅವರ ಸಂಗಾತಿ ಆಗಿದ್ದ, ಗ್ರಾಮ ಸ್ವರಾಜ್ಯಕ್ಕೆ ತಮ್ಮನ್ನು ಅರ್ಪಿಸಿದ್ದ ನಾನಾಜಿ ದೇಶ್ಮುಖ್ ಅವರಿಗೆ ದೇಶದ ಅತ್ಯುತ್ತಮ ನಾಗರೀಕ ಗೌರವವಾದ ಭಾರತ ರತ್ನ ಗೌರವ ನೀಡಲಾಗಿದೆ.
ಇಹಲೋಕ ತ್ಯಜಿಸಿದ ಸೇವಾರತ್ನ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕೆಂದು ಬಹು ವರ್ಷಗಳ ಒತ್ತಾಯವಾಗಿದ್ದು, ಈ ಬಾರಿಯೂ ಅವರಿಗೆ ಭಾರತ ರತ್ನ ನೀಡದಿರುವ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಗಳನ್ನು ಭಾರತ ರತ್ನಕ್ಕೆ ಪರಿಗಣಿಸದಿರುವುದನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಖ್ಯಮಂತ್ರಿ ಕಚೇರಿ ಸಹ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ.
ಇನ್ನೊಂದೆಡೆ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದಿರುವುದಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಸಮಧಾನ ವ್ಯಕ್ತಪಡಿಸಿದೆ.